ಕಳೆದ ಮೂರು ದಿನಗಳಿಂದ ಅರ್ಭಟಿಸುತ್ತಿರುವ ಮಳೆ: ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್‌

KannadaprabhaNewsNetwork |  
Published : Jul 19, 2024, 12:46 AM ISTUpdated : Jul 20, 2024, 01:35 PM IST
18ಎಚ್ಎಸ್ಎನ್13ಎ : ಶಿರಾಡಿ ಬಂದ್‌ ಆಗಿದ್ದರಿಂದ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು. | Kannada Prabha

ಸಾರಾಂಶ

ಕಳೆದ ಮೂರು ದಿನಗಳಿಂದ ಅರ್ಭಟಿಸುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರ ದೋಣಿಗಾಲ್ ಗ್ರಾಮದಿಂದ ಮಾರನಹಳ್ಳಿ ಗ್ರಾಮದವರಗಿನ 7 ಕಿ.ಮೀ. ರಸ್ತೆ ನರಕ ಸದೃಶವಾಗಿ ಬದಲಾಗಿದೆ.  

  ಸಕಲೇಶಪುರ :  ಈ ಬಾರಿ ಹಾಸನ ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿದೆ. ಅದರಲ್ಲೂ ಸಕಲೇಶಪುರ ತಾಲೂಕಿನಲ್ಲಿ ಪುನಃರಾಶಿ ಮಳೆಯ ರೌದ್ರಾವತಾರ ಮುಂದುವರೆದಿದ್ದು ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿದೆ.

ಕಳೆದ ಮೂರು ದಿನಗಳಿಂದ ಅರ್ಭಟಿಸುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರ ದೋಣಿಗಾಲ್ ಗ್ರಾಮದಿಂದ ಮಾರನಹಳ್ಳಿ ಗ್ರಾಮದವರಗಿನ 7 ಕಿ.ಮೀ. ರಸ್ತೆ ನರಕ ಸದೃಶವಾಗಿ ಬದಲಾಗಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಬೆಟ್ಟಗಳನ್ನು ಅವೈಜ್ಞಾನಿಕವಾಗಿ ತುಂಡರಿಸಿದ್ದು ಸದ್ಯ ಮಳೆಯಿಂದಾಗಿ 7 ಕಿ.ಮೀ.ಅಂತರದಲ್ಲಿ ಹತ್ತಕ್ಕೂ ಅಧಿಕ ಪ್ರದೇಶದಲ್ಲಿ ಅಪಾರ ಪ್ರಮಾಣದ ಭೂಕುಸಿತ ಸಂಭವಿಸಿದೆ. ಭೂಕುಸಿತದೊಂದಿಗೆ ನೂರಾರು ಮರಗಳು ಧರೆಗೆ ಉರುಳಿವೆ.

ಇದೇ ವೇಳೆ ಹೆದ್ದಾರಿ ಮುಂಜಾಗ್ರತಾ ಕ್ರಮವಾಗಿ ಕರ್ತವ್ಯದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಿಹಾರದ ಮೂಲದ ನೌಕರ ಅಖಿಲೇಶ್ ಎಂಬುವವರ ಕಾಲಿಗೆ ಪೆಟ್ಟು ಬಿದ್ದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಿಂದಾಗಿ ಮುಂಜಾನೆ ನಾಲ್ಕು ಗಂಟೆಯಿಂದ ಗುರುವಾರ ಬೆಳಿಗ್ಗೆ10 ಗಂಟೆವರೆಗೆ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ಸಾಗುವ ಲಘುವಾಹನಗಳನ್ನು ಚಾರ್ಮಾಡಿ ಹಾಗೂ ಹಾನುಬಾಳ್-ಮೂಡಿಗೆರೆ ರಸ್ತೆ ಮೂಲಕ ಸಾಗಲು ಅವಕಾಶ ಮಾಡಿಕೊಡಲಾಗಿದೆ

 ತಾಲೂಕಿನ ಬೆಳಗೋಡು ಗ್ರಾಮ ಸಮೀಪದ ಕಟ್ಟೆಪುರದಲ್ಲಿ ಮಳೆಯಿಂದಾಗಿ ಪಿಕ್‌ಅಪ್ ವಾಹನ ರಸ್ತೆ ಬದಿಗೆ ಉರುಳಿದ್ದರಿಂದ ನಾಲ್ಕು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಕೆಸರುಮಯ: ಮಾರನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಪಂಚತೀರ್ಥ ಮಠದ ಕೆರೆ ಏರಿ ಒಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಕೆಲಕಾಲ ಜಲರಾಶಿ ಸೃಷ್ಟಿಯಾಗಿದ್ದು ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಘಟನೆಯಿಂದಾಗಿ ಹೆದ್ದಾರಿ ಸಂಪೂರ್ಣ ಕೆಸರು ಹಾಗೂ ಕಲ್ಲುಗಳ ರಾಶಿಯಿಂದ ತುಂಬಿ ಹೋಗಿದೆ. ಕಳೆದ ನಾಲ್ಕು ವರ್ಷಗಳಿಂದ ಭೂಕುಸಿತ ಸಂಭವಿಸುತ್ತಿರುವ ದೋಣಿಗಾಲ್ ಗ್ರಾಮ ಸಮೀಪ ಹೆದ್ದಾರಿಯಲ್ಲೆ ನದಿಯಂತೆ ಮಳೆ ನೀರು ಹರಿಯುತ್ತಿದ್ದು ಇದರಿಂದಾಗಿ ಹೆದ್ದಾರಿ ಮತ್ತೊಮ್ಮೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ. 

ಇದೇ ಪ್ರದೇಶದಲ್ಲಿ ಹಾದುಹೋಗಿರುವ ಸಕಲೇಶಪುರ-ಹೆತ್ತೂರು ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಮಂಜ್ರಾಬಾದ್ ಕೋಟೆಯ ಗುಡ್ಡ ಕುಸಿಯುತ್ತಿದ್ದು ಈಗಾಗಲೇ ನಾಲ್ಕು ಮರಗಳು ಧರೆಗುರುಳಿವೆ. ಕೊಲ್ಲಹಳ್ಳಿ ಗ್ರಾಮ ಸಮೀಪ ಚತುಷ್ಪಥ ಹೆದ್ದಾರಿಯಲ್ಲಿ ಬಿರುಕು ಮೂಡಿದ್ದು ಅಪಾಯದ ಮುನ್ಸೂಚನೆ ಅರಿತ ಜಿಲ್ಲಾಡಳಿತ ಈ ಪ್ರದೇಶದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಎತ್ತಿನಹೊಳೆ ಚೆಕ್‌ಡ್ಯಾಮ್ ಒಂದರಲ್ಲಿ ಬಾರಿ ಪ್ರಮಾಣದ ನೀರು ತುಂಬಿ ಹರಿಯುತ್ತಿದ್ದು ಕೃತಕ ಜಲಪಾತ ಸೃಷ್ಟಿಯಾಗಿದೆ. 

ಕತ್ತಲಲ್ಲಿ ಗ್ರಾಮೀಣ ತಾಲೂಕು: ಕಳೆದ ಮೂರು ದಿನಗಳ ನಿರಂತರ ಗಾಳಿ ಮಳೆಗೆ ತಾಲೂಕಿನ ನೂರಕ್ಕೂ ಅಧಿಕ ಗ್ರಾಮಗಳು ಕತ್ತಲಲ್ಲಿ ಮುಳುಗಿದ್ದು ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯ ಪಶ್ಚಿಮಘಟ್ಟದಂಚಿನ ಗ್ರಾಮಗಳು ಕತ್ತಲೆಯಲ್ಲಿ ದಿನ ಕಳೆಯುತ್ತಿವೆ. ಹಾನುಬಾಳ್ ಹೋಬಳಿ ದೇವಾಲದಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಬ್ಬರು ಮಾತ್ರ ಲೈನ್‌ಮೆನ್‌ಗಳಿದ್ದು ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಎತ್ತಿನಹೊಳೆ ಚೆಕ್ ಡ್ಯಾಮ್ ತುಂಬಿ ಹರಿಯುತ್ತಿದ್ದು ಕೃತಕ ಜಲಪಾತ ಸೃಷ್ಟಿಯಾಗಿದೆ.

  ಭೂಕುಸಿತ: ವ್ಯಾನ್‌ ಅಪ್ಪಚ್ಚಿ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ತಾಲೂಕಿನ ದೊಡ್ಡತಪ್ಪಲೆ ಗ್ರಾಮ ಸಮೀಪ ಬಾರಿ ಪ್ರಮಾಣದ ಮಣ್ಣುಗಣಿಗಾರಿಕೆ ನಡೆಸಿರುವ ಪ್ರದೇಶದಲ್ಲಿ ಬುಧವಾರ ರಾತ್ರಿ ಭೂಕುಸಿತ ಸಂಭವಿಸಿದೆ. ಈ ವೇಳೆ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಮಾರುತಿ ವ್ಯಾನ್ ಭೂಕುಸಿತಕ್ಕೆ ಸಿಲುಕಿ ನಜ್ಜುಗುಜ್ಜಾಗಿದೆ. ಘಟನೆಯ ವೇಳೆ ವ್ಯಾನ್ ಹೊರಭಾಗದಲ್ಲಿ ನಿಂತಿದ್ದ ಬೇಲೂರು ತಾಲೂಕು ಬಿಕ್ಕೋಡು ಗ್ರಾಮದ ಶರತ್ ಎಂಬುವವರಿಗೆ ಪೆಟ್ಟಾಗಿದ್ದು ಇನ್ನೂ ಮೂವರು ಅಪಾಯದಿಂದ ಪಾರಾಗಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ