ಶಿರಹಟ್ಟಿ ತಹಸೀಲ್ದಾರ್ ಭರವಸೆ: ರೈತರ ಧರಣಿ ಹಿಂದಕ್ಕೆ

KannadaprabhaNewsNetwork |  
Published : Jan 07, 2026, 02:45 AM IST
ಧರಣಿ ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸಿದರು. | Kannada Prabha

ಸಾರಾಂಶ

ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಆಗಮಿಸಿ ಧರಣಿ ನಿರತ ರೈತರ ಸಮಸ್ಯೆ ಆಲಿಸಿ ಅವರಿಗೆ ಬೆಂಬಲ ಸೂಚಿಸಿ ಮಾತನಾಡಿ, ನಿಮ್ಮ ಬೇಡಿಕೆ ಈಡೇರಿಸಲು ರೇಷ್ಮೆ ಇಲಾಖೆ ಜಿಲ್ಲಾ ಉಪನಿರ್ದೇಶಕರು ಲಂಚ ಕೇಳುತ್ತಿರುವ ಬಗ್ಗೆ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಶಿರಹಟ್ಟಿ: ರೈತರಿಗೆ ದೊರೆಯುವ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಹಾಯಧನ, ಚಾಕಿ ವೆಚ್ಚ, ಪ್ರೋತ್ಸಾಹಧನ ನೀಡಲು ಲಂಚ ಕೇಳುತ್ತಿದ್ದ ಜಿಲ್ಲಾ ರೇಷ್ಮೆ ಉಪನಿರ್ದೇಶಕ ಕೈಲಾಸಮೂರ್ತಿ ಅವರ ನಡೆ ಖಂಡಿಸಿ ಎರಡನೇ ದಿನವೂ ರೈತರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಆಗಮಿಸಿ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರೈತರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನಿಡಿದ ನಂತರ ರೈತರು ಧರಣಿ ಕೈಬಿಟ್ಟರು.ಈ ವೇಳೆ ಧರಣಿ ಸ್ಥಳಕ್ಕೆ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಆಗಮಿಸಿ ಧರಣಿ ನಿರತ ರೈತರ ಸಮಸ್ಯೆ ಆಲಿಸಿ ಅವರಿಗೆ ಬೆಂಬಲ ಸೂಚಿಸಿ ಮಾತನಾಡಿ, ನಿಮ್ಮ ಬೇಡಿಕೆ ಈಡೇರಿಸಲು ರೇಷ್ಮೆ ಇಲಾಖೆ ಜಿಲ್ಲಾ ಉಪನಿರ್ದೇಶಕರು ಲಂಚ ಕೇಳುತ್ತಿರುವ ಬಗ್ಗೆ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ೨೦೦೧ರಿಂದಲೂ ರೇಷ್ಮೆ ಬೆಳೆಗಾರ ರೈತರಿಗೆ ಯಾಕೆ ಪ್ರೋತ್ಸಾಹಧನ ನೀಡಿಲ್ಲ ಎನ್ನುವ ಕುರಿತು ಅಧಿಕಾರಿಗ ಜತೆ ಚರ್ಚೆ ಮಾಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ರೈತರ ಬೇಡಿಕೆಯಂತೆ ಅಧಿಕಾರಿಗಳು ರೈತರ ಪರ ಕೆಲಸ ಮಾಡದಿದ್ದರೆ ಕ್ಷೇತ್ರವನ್ನು ಬಿಟ್ಟು ಬೇರೆಡೆಗೆ ಹೋಗಲಿ ಎಂಬುದು ರೈತರ ಪರವಾಗಿ ನಮ್ಮ ಆಗ್ರಹವೂ ಆಗಿದೆ. ರೈತರ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಜಿಲ್ಲಾಧಿಕಾರಿಗಳ ಮುಖಾಂತರ ಈಡೆರಿಸಲು ಶ್ರಮಿಸಲಾಗುವುದು. ಸತ್ಯಾಗ್ರಹ ಹಾಗೂ ಧರಣಿ ಕುಡುವ ಮೂಲಕ ರೈತರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬರುವುದು ಅಧಿಕಾರಿಗಳಿಗೆ ಶೋಭೆಯಲ್ಲ. ರೇಷ್ಮೆ ಬೆಳೆಗಾರ ರೈತರ ಸಮಸ್ಯೆಗಳನ್ನು ಸಚಿವ ಎಚ್.ಕೆ. ಪಾಟೀಲ ಅವರ ಗಮನಕ್ಕೂ ತರಲಾಗುವುದು ಎಂದರು.ಧರಣಿ ಕುಳಿತ ರೈತರು ಮನವಿ ಸಲ್ಲಿಸಿ ಮಾತನಾಡಿ, ಕೂಡಲೆ ರೇಷ್ಮೆ ಉಪನಿರ್ದೇಶಕರನ್ನು ಬೆರೆಡೆಗೆ ವರ್ಗಾವಣೆ ಮಾಡಬೇಕು. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿಗೆ ತಲಾ ಒಂದೊಂದು ಡಿ ಗ್ರೂಪ್ ಹೊರಗುತ್ತಿಗೆ ಸಿಬ್ಬಂದಿಯನ್ನು ನೀಡಬೇಕು. ರೇಷ್ಮೆ ನಾಟಿ ಸಹಾಯಧನವನ್ನು ಶೀಘ್ರವೆ ಬಿಡುಗಡೆ ಮಾಡಬೇಕು. ಎರಡು ತಾಲೂಕಿನ ರೈತರಿಗೆ ರೇಷ್ಮೆ ಸಲಕರಣೆಗಳನ್ನು ನೀಡಬೇಕು. ಇನ್ನೂ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಉಪನಿರ್ದೇಶಕರು ಭರವಸೆ ನೀಡಿದಂತೆ ಸಹಾಯಧನವನ್ನು ನೀಡಬೇಕು. ಅಧಿಕಾರಿಗಳ ಲಂಚದ ದಾಹ ಕೊನೆಗೊಳ್ಳಬೇಕು ಹಾಗೂ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಕೋಳಿ ಸಾಗಾಣಿಕೆ ಮಾಡಲು ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಎರಡು ತಾಲೂಕಿನ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆಗಳು ಮತ್ತು ಸತ್ಯಾಗ್ರಹದ ಉದ್ದೇಶವನ್ನು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿಗಳು ರೈತರ ಬೇಡಿಕೆಗಳಿಗೆ ಸ್ಪಂದಿಸಿ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಎ. ಸೂರಪೂರ, ಹುಮಾಯೂನ ಮಾಗಡಿ, ಎಂ.ಕೆ. ಲಮಾಣಿ, ಮಾಬುಸಾಬ ಲಕ್ಷ್ಮೇಶ್ವರ, ಬಸವರಡ್ಡಿ ಹನುಮರಡ್ಡಿ, ಹನುಮಂತಪ್ಪ ಕೇಳಲರ, ಮಲ್ಲಿಕಾರ್ಜುನ ದೊಡ್ಡಮನಿ, ಸಣ್ಣ ಮುದಕಪ್ಪ ತಿರಕಣ್ಣವರ, ನಿಂಗಪ್ಪ ಮಲ್ಲೂರ, ಚಂದ್ರಶೇಖರ ಬಂಡಿ, ದೇವರಾಜ ರಡ್ಡೆರ, ರವಿ ಚೆನ್ನಪೂರಮಠ, ಮೌನೇಶ, ಪ್ರಕಾಶ ಕಲ್ಯಾಣಿ, ಸಂಜೀವ ಮಲ್ಲೂರ, ಇಸ್ಮಾಯಿಲ ಢಾಲಾಯತ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ