ಶಿರಹಟ್ಟಿ: ಅದ್ಧೂರಿಯ ಮೌನೇಶ್ವರ ರಥೋತ್ಸವ

KannadaprabhaNewsNetwork |  
Published : Sep 08, 2026, 02:45 AM IST
ಕ್ಷೇತ್ರ ಶ್ರೀ ವರವಿ ಮೌನೇಶ್ವರರ ರಥೋತ್ಸವ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಕ್ಷೇತ್ರ ಶ್ರೀ ವರವಿ ಮೌನೇಶ್ವರ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ಹಾಗೂ ವಾದ್ಯಮೇಳಗಳ ಮಧ್ಯೆ ಸಡಗರ ಸಂಭ್ರಮದಿಂದ ಶ್ರಾವಣ ಸೋಮವಾರದಂದು ಸಂಜೆ ಭಕ್ತಿ ಭಾವಗಳ ಸಮರ್ಪಣೆಯ ನಡುವೆ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ತಾಲೂಕಿನ ಕ್ಷೇತ್ರ ಶ್ರೀ ವರವಿ ಮೌನೇಶ್ವರ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ಹಾಗೂ ವಾದ್ಯಮೇಳಗಳ ಮಧ್ಯೆ ಸಡಗರ ಸಂಭ್ರಮದಿಂದ ಶ್ರಾವಣ ಸೋಮವಾರದಂದು ಸಂಜೆ ಭಕ್ತಿ ಭಾವಗಳ ಸಮರ್ಪಣೆಯ ನಡುವೆ ವಿಜೃಂಭಣೆಯಿಂದ ಜರುಗಿತು.

ಭಕ್ತ ಸಮೂಹ ತಂಡೋಪತಂಡವಾಗಿ ವರವಿ ಮೌನೇಶ್ವರ ರಥೋತ್ಸವದೆಡೆಗೆ ದಾವಿಸಿ ಬರುತ್ತಿದ್ದರು. ಬಸ್ಸು, ಕಾರು, ಜೀಪು, ಚಕ್ಕಡಿ ಮತ್ತು ಅಟೋಗಳಲ್ಲದೇ ಶಕ್ತಿ ಯೋಜನೆ ಜಾರಿಯಿಂದಾಗಿ ಉಚಿತವಾಗಿ ಮಹಿಳೆಯರೆಲ್ಲ ಸರ್ಕಾರಿ ಬಸ್ಸ್ ಏರಿ ಬರುತ್ತಿರುವುದು ಸಾಮಾನ್ಯವಾಗಿತ್ತು.

ಎಕ್ ಲಾಕ್ ಐಸಿ ಹಜಾರ್ ಪಾಚೋಪೀರ್ ಪೈಗಂಬರ್, ಹರಹರ ಮಹಾದೇವ ಎಂಬ ಮಂತ್ರಘೋಷಗಳು ಮೊಳಗಿದವು. ಭಾವೈಕ್ಯದ ಸಂಕೇತ ಸಾರುವ ಕೇಸರಿ ಮತ್ತು ಹಸಿರು ಸಂಕೇತದ ಧ್ವಜಗಳನ್ನು ಹಿಡಿದ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿಯ ಪರಾಕಾಷ್ಠೆ ಮೆರೆದರು. ಕಟ್ಟಡದ ಮೇಲೆ ಹಾಗೂ ಎತ್ತರದ ಪ್ರದೇಶದ ಮೇಲೆ ನಿಂತು ದೂರದಿಂದಲೇ ರಥೋತ್ಸವವನ್ನು ಕಣ್ಣು ತುಂಬಿಕೊಂಡರು.

ಶಿರಹಟ್ಟಿ, ಸೊರಟೂರ, ಹಂಗನಕಟ್ಟಿ, ಜಲ್ಲಿಗೇರಿ, ಕಡಕೋಳ, ಕುಸ್ಲಾಪೂರ, ಗುಡ್ಡದಪೂರ ಸೇರಿದಂತೆ ಅನೇಕ ಹಳ್ಳಿಗಳಿಂದ ಅಸಂಖ್ಯಾತ ಭಕ್ತರು ಪಾದಯಾತ್ರೆಯ ಮೂಲಕ ಮೌನೇಶ್ವರ ರಥೋತ್ಸವದೆಡೆ ಧಾವಿಸಿ ಬರುತ್ತಿದ್ದರು.

ರಥವನ್ನು ದೇವಾಲಯದ ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿನ ತುದಿಯ ವರೆಗೆ ಸಾಯಂಕಾಲ ೫.೩೦ರಿಂದ ೬ರ ವರೆಗೆ ಎಳೆಯಲಾಯಿತು. ಇಳಿಹೊತ್ತು. ಸೂರ್ಯ ಮುಳುಗುವ ಸಂದರ್ಭದಲ್ಲಿ ಸುಕ್ಷೇತ್ರದ ಆವರಣದಲ್ಲಿ ಅಪಾರ ಸಂಖ್ಯೆ ಭಕ್ತರು ಮೌನೇಶ್ವರರ ರಥೋತ್ಸವವನ್ನು ಕಣ್ತುಂತಿಬಿಕೊಳ್ಳುವ ಉತ್ಸುಕದಲ್ಲಿದ್ದರು. ಪೀಠಾಧಿಪತಿ ಮೌನೇಶ್ವರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡುವುದೇ ತಡ, ಭಕ್ತವೃಂದ ಮೌನೇಶ್ವರ ಮಹಾರಾಜ ಕೀ ಜೈ ಎಂಬ ಮುಗಿಲು ಮುಟ್ಟುವ ಜಯಘೋಷ ಮಾಡುತ್ತಾ ರಥವನ್ನು ಎಳೆದು ಸಂಭ್ರಮಿಸಿದರು.

ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತವೃಂದ ರಥವನ್ನು ಭಕ್ತಿ ಭಾವಗಳಿಂದ ಎಳೆದರು. ಭಕ್ತ ಸಮೂಹ ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿಯ ಸಮರ್ಪಣೆ ಮಾಡಿ ಕೈಮುಗಿದು ನಮಿಸಿದರು. ಇಷ್ಠಾರ್ಥ ಈಡೇರಿಸುವಂತೆ ಬೇಡಿಕೊಂಡರು. ಕರ್ನಾಟಕ ಮಾತ್ರವಲ್ಲ ನೆರೆಯ ಆಂಧ್ರ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದರು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ದೇವರ ಕೃಪೆಯಿಂದ ನಾಡಿನ ಎಲ್ಲ ಜನರ ಬದುಕು ಹಸನಾಗಿರಲಿ, ಮಳೆ ಬೆಳೆ ಚೆನ್ನಾಗಿ ಬಂದು ಜನತೆಯ ಮನೆ ಮನ ಬೆಳಗುವಂತಾಗಲಿ ಎಂದು ಹರಸಿದರು. ಮಾನವ ತನ್ನ ಜೀವನದಲ್ಲಿ ಮೇಲು ಕೀಳು ಎಂಬ ಬೇಧ-ಭಾವ ಮರೆತು ಎಲ್ಲ ಧರ್ಮದ ತಿರುಳು ಒಂದೇ ಎಂಬುದನ್ನು ಅರಿತು, ಸನ್ಮಾರ್ಗದಲ್ಲಿ ನಡೆದಾಗಲೇ ಮಾನವನಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎಂದು ನುಡಿದರು.

ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದಲ್ಲಿ ಶರಣರ ತತ್ವಾದರ್ಶ ಅಳವಡಿಸಿಕೊಳ್ಳಿ: ಡಾ. ಅನ್ನದಾನೀಶ್ವರ ಶ್ರೀಗಳು
ಯಕ್ಷೋತ್ಸವ ತಾಳಮದ್ದಲೆ ಸ್ಪರ್ಧೆಯಲ್ಲಿ ೨೭ ತಂಡ ಭಾಗಿ