ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ಪಟ್ಟಣದ ಸೌಂದರ್ಯಕ್ಕೆ ಉದ್ಯಾನವನಗಳು ಭೂಷಣ. ಅದರಂತೆ ಪಟ್ಟಣದಲ್ಲಿ ನೋಡಲು ಹೇಳಿಕೊಳ್ಳುವಂತಹ ಒಂದೂ ಉದ್ಯಾನವನ ಕಾಣ ಸಿಗದು. ಪಪಂ ಮುಖ್ಯಾಧಿಕಾರಿಗಳು ಸೇರಿದಂತೆ ಸಧ್ಯ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ ಗಾರ್ಡನ್ ಅಭಿವೃದ್ದಿ ಪಡಿಸುವತ್ತ ಹೆಚ್ಚಿನ ಅಸಕ್ತಿ ತೋರಿಸಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ.
ಪಟ್ಟಣದ ವಿದ್ಯಾನಗರ, ಫಕ್ಕೀರೇಶ್ವರ ನಗರ, ಶಬ್ಬೀರ ಕಾಲನಿ ಅಲ್ಲದೇ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಸಿದ್ದರಾಮೇಶ್ವರ ನಗರ, ಏಳು ಕೋಟಿ ನಗರ ಸೇರಿದಂತೆ ಇನ್ನೂ ಹಲವೆಡೆ ಹೊಸ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು, ಈ ಎಲ್ಲ ಸ್ಥಳಗಳಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಲಾದ ಜಾಗ ಎಂದು ಅಧಿಕಾರಿಗಳು ಹೇಳುತ್ತಿದ್ದು, ದಶಕಗಳೇ ಕಳೆದರೂ ಉದ್ಯಾನವನ ನಿರ್ಮಾಣವಾಗಿಲ್ಲ. ವಾತಾವರಣ ಶುದ್ದವಾಗಿಟ್ಟುಕೊಳ್ಳಲು ಉದ್ಯಾನವನದ ಅಗತ್ಯತೆ ಹೆಚ್ಚಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ.ಸಧ್ಯ ತಾಲೂಕು ಕ್ರೀಡಾಂಗಣ, ಡಬಾಲಿ ಹೈಸ್ಕೂಲ್ ಮೈದಾನ, ಛಬ್ಬಿ ರಸ್ತೆ, ಹರಿಪುರ, ಯಲಿಶಿರುಂದ, ಸೊರಟೂರ ರಸ್ತೆಗಳೇ ಬಹುತೇಕ ನಾಗರಿಕರಿಗೆ ವಾಕಿಂಗ್ ತಾಣಗಳಾಗಿವೆ. ದಿನನಿತ್ಯ ಬೆಳಗಿನ ಜಾವ ಮತ್ತು ಸಂಜೆ ಹೊತ್ತಿಗೆ ಸೂಮಾರು ನೂರರಿಂದ ಎರಡನೂರು ಜನ ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಇವರಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಪಪಂ ಸದಸ್ಯರೂ ಸೇರಿರುತ್ತಾರೆ.
ಪಾರ್ಕಗಳೇ ಇಲ್ಲ: ಬೇಸಿಗೆ ರಜೆ ಸಮಯದಲ್ಲಿ ಪಟ್ಟಣಗಳಿಗೆ ಅತಿಥಿಗಳು ಬರುವುದು ಸಾಮಾನ್ಯ. ಹೀಗೆ ಬಂದ ಅತಿಥಿಗಳಿಗೆ ತೋರಿಸಲು ಯಾವುದೇ ಪಾರ್ಕಗಳಿಲ್ಲ. ತೋಟಗಾರಿಕೆ ಇಲಾಖೆಯವರು ಚಿಕ್ಕದಾದ ತಮ್ಮ ಕಾರ್ಯಾಲಯದ ಆವರಣದಲ್ಲಿಯೇ ಉದ್ಯಾನವನ ನಿರ್ಮಿಸಿಕೊಂಡಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಜನತೆ ಅಲ್ಲಿ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಒಟ್ಟಾರೆಯಾಗಿ ತಾಲೂಕು ಕೇಂದ್ರ ಸ್ಥಳದಲ್ಲಿ ಒಂದು ಸುಸಜ್ಜಿತ ಉದ್ಯಾನವನ ನಿರ್ಮಾಣವಾಗಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ.