ಹಾವೇರಿ: ಸರ್ವಸಮಾನತೆ ಧರ್ಮವನ್ನು ಜಗತ್ತಿಗೆ ಕೊಟ್ಟು, ಮನುಕುಲದ ಒಳಿತನ್ನು ಸಾರ್ವತ್ರಿಕರಣಗೊಳಿಸಿ, ಕಾಯಕ ಸಿದ್ಧಾಂತವನ್ನು ಶಿವಯೋಗದೊಂದಿಗೆ ಬೆರೆಸಿ, ವಚನ ಸಾಹಿತ್ಯದ ಬೆಳಕನ್ನು ಜಗತ್ತಿಗೆ ನೀಡಿದ ಮಹಾನ್ ಮಾನವಾತಾದಿಗಳು ಬಸವಾದಿ ಶಿವಶರಣರು ಎಂದು ವಿಜಯಪುರದ ಗಾಣಿಗ ಗುರುಪೀಠ ವನಶ್ರೀ ಸಂಸ್ಥಾನಮಠದ ಜಗದ್ಗುರು ಬಸವಕುಮಾರ ಸ್ವಾಮೀಜಿ ಹೇಳಿದರು.
ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಭಾರತದಲ್ಲಿ ಹಲವು ಜಾತಿ, ಧರ್ಮ ಮತ್ತು ಭಾಷೆಯ ಜನರಿದ್ದಾರೆ. ಆದರೆ, ನಾವೆಲ್ಲ ಭಾರತೀಯರು ಎನ್ನುವ ಭಾವೈಕ್ಯತೆ ಇದೆ. ಇಂಥ ಭಾವೈಕ್ಯತೆಗೆ ಧಕ್ಕೆ ತರುವ ಮತೀಯ ಶಕ್ತಿಗಳೂ ಇವೆ. ಆದರೆ, ಮಹಾನ್ ತಪಸ್ವಿಗಳ ದಾರಿಯಲ್ಲಿ ನಡೆದುಕೊಂಡರೆ ಸಂಘರ್ಷಗಳಿಗೆ ಅವಕಾಶವೇ ಇರುವುದಿಲ್ಲ. ಅಂತಹ ಧಾರ್ಮಿಕ ಪರಂಪರೆಗೆ ಹುಕ್ಕೇರಿಮಠ ಹೆಸರುವಾಸಿಯಾಗಿದೆ ಎಂದರು.
ಸಮ್ಮುಖ ವಹಿಸಿದ್ದ ಚಿಕ್ಕಮಗಳೂರಿನ ಬಸವತತ್ವ ಪೀಠದ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಒಂದು ಕಾಲದಲ್ಲಿ ಬದುಕೇ ಬರಡಾಗಿದ್ದ ಊರು ಹಾನಗಲ್ಲ. ಆದರೆ, ಯುಗಪುರುಷ ಕುಮಾರ ಸ್ವಾಮಿಗಳ ಕತೃತ್ವ ಶಕ್ತಿಯಿಂದ ಈ ಪ್ರದೇಶವೂ ಸಾಂಸ್ಕೃತಿಕ ಪ್ರತಿಫಲವಾಗಿದೆ. ಅಂಥ ಕರ ಸಂಜಾತರಾದ ಹುಕ್ಕೇರಿಮಠದ ಲಿಂ. ಶಿವಬಸವ ಶ್ರೀಗಳು ಮತ್ತು ಲಿಂ. ಶಿವಲಿಂಗ ಶ್ರೀಗಳು ತಮ್ಮ ತಪಸ್ ಶಕ್ತಿಯಿಂದ ಮರಿಕಲ್ಯಾಣ ಹಾವೇರಿಯನ್ನು ಹಿರಿಕಲ್ಯಾಣವಾಗಿಸಿದ್ದಾರೆ ಎಂದು ಹೇಳಿದರು.ಜಡೆ ಸಂಸ್ಥಾನಮಠದ ಜಗದ್ಗುರು ಕುಮಾರಕೆಂಪಿನ ಸಿದ್ಧವೃಷಬೇಂದ್ರ ಸ್ವಾಮೀಜಿ, ಚಿತ್ರದುರ್ಗದ ಮಡಿವಾಳ ಗುರುಪೀಠದ ಬಸವಮಾಚೀದೇವ ಸ್ವಾಮೀಜಿ ಮಾತನಾಡಿದರು. ಉಡುಪಿಯ ಪ್ರಹ್ಲಾದ ಆಚಾರ್ಯ ನೆರಳು ಬೆಳಕಿನ ಆಟವನ್ನು ಪ್ರದರ್ಶಿಸಿದರು. ಪುಣ್ಯಕೋಟಿ ಹಾಡು, ಕೋತಿ ಸಂಭಾಷಣೆ, ಮಹಾನ್ ವ್ಯಕ್ತಿಗಳ ನೆರಳು ಭಾವಚಿತ್ರ ಪ್ರದರ್ಶನ ನೋಡುಗರ ಜನಮನ ಸೂರೆಗೊಂಡಿತು.
ಸಮಾರಂಭದಲ್ಲಿ ದುಂಡಿಸಿಯ ಕುಮಾರ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಶ್ರೀಗಳು, ಅಶೋಕ ಹಾವನೂರ, ತಮ್ಮಣ್ಣ ಮುದ್ದಿ, ಗಂಗಮ್ಮ ಯರೇಶೀಮಿ, ತಿಪ್ಪೇಸ್ವಾಮಿ ಶಿವಸಾಲಿ, ನೀಲಮ್ಮ ಗುಂಜೆಟ್ಟಿ, ಶಿವಬಸಪ್ಪ ತುಪ್ಪದ, ಗಣೇಶ ಮುಷ್ಠಿ, ಗಿರಿಜನ್ನ ಹೂಗಾರ, ಬಸವರಾಜ ಉಳ್ಳಾಗಡ್ಡಿ, ಚಂದ್ರಶೇಖರ ಸೊಲಭಗೌಡ್ರ, ಪ್ರೇಮಾ ಕಬ್ಬೂರ, ಅಶೋಕ ಮಾಗನೂರ, ಮಾಂತಣ್ಣ ಸುರಳಿಹಳ್ಳಿ, ಅಮೃಥಮ್ಮ ಶೀಲವಂತರ, ಲಲಿತಕ್ಕ ಹೊರಡಿ, ಗಂಗಣ್ಣ ಮಳಗಿ, ಬಿ. ಬಸವರಾಜ, ನಾಗರಾಜ ನಡುವಿನಮಠ ಇತರರಿದ್ದರು. ಶಿವರುದ್ರಯ್ಯ ಗೌಡಗಾಂವ್ ಪ್ರಾರ್ಥಿಸಿದರು. ಆನಂದ ಅಟವಾಳಗಿ ಸ್ವಾಗತಿಸಿದರು. ವೀರಬಸವ ದೇವರು ಕಾರ್ಯಕ್ರಮ ನಿರ್ವಹಿಸಿದರು.