ಕುಕನೂರು: ಬೆದವಟ್ಟಿಯ ಲಿಂ. ಶಿವಸಂಗಮೇಶ್ವರ ಶ್ರೀಗಳು ಭಕ್ತರ ಹೃದಯ ಮಂದಿರದಲ್ಲಿ ನೆಲೆಸಿರುವ ಶಿರೋಮಣಿ ಎಂದು ಯಲಬುರ್ಗಾ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಬಣ್ಣಿಸಿದರು.
ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವೇಶ್ವರ ಸ್ವಾಮೀಜಿ ಮಾತನಾಡಿ, ಬೆದವಟ್ಟಿ ಶ್ರೀಗಳು ಗುರು ಸ್ವರೂಪವಾಗಿ ನಿಂತು ಭಕ್ತಿಯ, ಸಂಸ್ಕಾರದ ಪರಂಪರೆ ಬೆಳಗಿಸಿದರು. ಶ್ರೀಗಂಧದ ಕೊರಡಿನಂತೆ ಸಮಾಜಕ್ಕೆ ಸುವಾಸನೆ ಸೂಸಿದರು ಎಂದರು.
ಮೈನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬೆದವಟ್ಟಿ ಶ್ರೀಗಳು ಎಲ್ಲ ಸ್ವಾಮೀಜಿಗಳಿಗೆ ತಂದೆಯ ಸ್ಥಾನದಲ್ಲಿದ್ದು, ಸದಾ ಮಾರ್ಗದರ್ಶಕರಾಗಿದ್ದರು ಎಂದರು. ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ಬೆದವಟ್ಟಿ ಶ್ರೀಗಳು ಅತ್ಯಂತ ಶಿವಪೂಜಾ ನಿಷ್ಠರು. ಅವರ ಧಾರ್ಮಿಕ ಶಕ್ತಿಯಿಂದ ಭಕ್ತರ ಕಷ್ಟಕ್ಕೆ ಸದಾ ವೇಳೆ ಸ್ಪಂದಿಸುತ್ತಿದ್ದರು ಎಂದರು.ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಮಂಗಳೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿ, ಅಳವಂಡಿಯ ಮರುಳರಾಧ್ಯ ಸ್ವಾಮೀಜಿ, ತಾವರಗೆರೆ ಮಹೇಶ್ವರ ಶರಣರು, ಚಳಗೇರಿಯ ವೀರಸಂಗಮೇಶ್ವರ ಸ್ವಾಮೀಜಿ, ಮಕ್ಕಳಿಯ ಶಿವಾನಂದ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಹಿರೇಸಿಂಧೋಗಿಯ ಚಿದಾನಂದ ಸ್ವಾಮೀಜಿ, ಪ್ರಮುಖರಾದ ಅಂದಪ್ಪ ಜವಳಿ, ವೀರಯ್ಯ ತೋಂಟದಾರ್ಯ ಮಠ, ಗದಿಗೆಪ್ಪ ಪವಾಡಶೆಟ್ಟಿ, ಚನ್ನಬಸಯ್ಯ ಸರಗಣೇಚಾರ, ರೈತರು, ಭಕ್ತರಿದ್ದರು.
30 ಎತ್ತಿನ ಬಂಡಿಯಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ:ಬೆದವಟ್ಟಿಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೆ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ 30 ಎತ್ತಿನ ಬಂಡಿಗಳಲ್ಲಿ ಶ್ರೀಗಳ ಭಾವಚಿತ್ರವಿರಿಸಿ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕುಂಭ ಹೊತ್ತು ಸಾಗಿದರು.