-ಶಿವಾಜಿ ಮಹಾರಾಜರ 395ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಛತ್ರಪತಿ ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ಸಾಹಸಿ ಹಾಗೂ ಚಕ್ರವರ್ತಿಯಾಗಿದ್ದಾರೆಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಬಣ್ಣಿಸಿದರು. ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ 395ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿವಾಜಿಯವರು ತನ್ನ ತಾಯಿಯ ಹೊಟ್ಟೆಯಲ್ಲಿರುವಾಗಲೇ ಸಾಹಸಮಯ ಕಥೆಗಳನ್ನು ಕೇಳಿ ಜನಿಸಿದ ಧೈರ್ಯವಂತ. ಸಂಸ್ಕಾರಿ, ಶಿಸ್ತುಬದ್ಧ ಜೀವನ ಇವರದಾಗಿತ್ತೆಂದು ಹೇಳಿದರು. ದೇಶದ ಒಗ್ಗೂಡುವಿಕೆಗೆ ಶ್ರಮಿಸಿದ ಶೌರ್ಯ, ಸಾಹಸ ಮತ್ತು ರಾಷ್ಟ್ರಭಕ್ತಿ ಹೊಂದಿದ್ದ ಇವರ ಆದರ್ಶ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿ, ತುಳಜಾಪುರದ ಜಗನ್ಮಾತೆ ಜಗದಂಭೆಯಿಂದ ವೀರಖಡ್ಗ ಪಡೆದ ಮಹಾನ್ ಭಕ್ತನಾಗಿದ್ದ. ಯುದ್ಧಗಳಲ್ಲಿ ಸಾಹಸಿಯಾಗಿದ್ದು, ಇವರೊಬ್ಬ ಹಿಂದೂ ರಾಷ್ಟ್ರದ ಪ್ರತಿಪಾದಕರಾಗಿದ್ದರೆಂದು ಹೇಳಿದರು.ವೇದಿಕೆಯಲ್ಲಿ ಮರಾಠ ಸಮಾಜದ ಗೌರವಾಧ್ಯಕ್ಷ ಶ್ರೀರಂಗ್ ಜಾಧವ್, ಜಿಲ್ಲಾಧ್ಯಕ್ಷ ರಾಜಕುಮಾರ ಢವಳೆ, ಡಿವೈಎಸ್ಪಿ ಅರುಣಕುಮಾರ, ಹಿಂದೂ ಸೇವಾ ಸಮಿತಿ ಮುಖಂಡ ಸಿದ್ರಾಮರೆಡ್ಡಿ ಮಧ್ವಾರ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಇದ್ದರು. ಮರಾಠ ಸಮಾಜದವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
------ಫೋಟೊ: ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಜಯಂತ್ಯುತ್ಸವ ಸಮಿತಿ ಶಿವಾಜಿ ಮಹಾರಾಜರ 395ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
-----19ವೈಡಿಆರ್13