ದೊಡ್ಡಬಳ್ಳಾಪುರ: ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲಗೊಳ್ಳಬೇಕೆಂಬ ವಿಚಾರಗಳನ್ನು ಅಂಬೇಡ್ಕರ್ ಪ್ರಬಲವಾಗಿ ಪ್ರತಿಪಾದಿಸಿದರು. ಮಹಿಳೆಯರ ಹಲವು ವಿಚಾರಗಳನ್ನು ಅವರ ಬರಹ ಮತ್ತು ಭಾಷಣಗಳಲ್ಲಿ ನಾವು ಕಾಣಬಹುದಾಗಿದೆ ಎಂದು ಉಪನ್ಯಾಸಕ ಎನ್.ಮಹೇಶ್ ತಿಳಿಸಿದರು. ಇಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಡಾ..ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಂವಿಧಾನಾತ್ಮಕವಾಗಿ ದೊರಕಿಸಿಕೊಟ್ಟ ಅಂಬೇಡ್ಕರ್, ಮಹಿಳಾ ಪರ ಹಿಂದೂ ಕೋಡ್‌ಬಿಲ್, ಮಹಿಳಾ ಕಾರ್ಮಿಕರ ಕಲ್ಯಾಣ, ಸಮಾನ ವೇತನ, ತಾಯ್ತನದ ಸೌಲಭ್ಯ, ಮಹಿಳಾ ಶಿಕ್ಷಣ ಮುಂತಾದ ಹಕ್ಕುಗಳನ್ನು ದೊರೆಯುವಂತೆ ಮಾಡಲು ಶ್ರಮಿಸಿದರು ಎಂದರು.
ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಅಂಬೇಡ್ಕರ್ ವಿಚಾರಧಾರೆಗಳು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತವೆ. ಸಾಮಾಜಿಕ ನ್ಯಾಯವನ್ನು ಜಾರಿ ಮಾಡಲು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಅಂಶಗಳನ್ನು ಅಳವಡಿಸಿದರು. ಸಮಸಮಾಜ ನಿರ್ಮಾಣವೇ ಅವರ ಮುಖ್ಯ ಗುರಿಯಾಗಿತ್ತು. ವಿಶ್ವದಲ್ಲಿ ಭಾರತಕ್ಕೆ ವಿಶೇಷ ಗೌರವ, ಘನತೆ, ಕೀರ್ತಿ ಲಭಿಸುತ್ತಿರುವುದಕ್ಕೆ ಸಂವಿಧಾನ ಕಾರಣ ಎಂದರು.ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಅಂಬೇಡ್ಕರ್ ಚಿಂತನೆಗಳು, ಬರಹ, ಭಾಷಣ, ಜೀವನ ಚರಿತ್ರೆ ಎಲ್ಲರಿಗೂ ಸುಲಭವಾಗಿ ತಲುಪುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆಯಡಿ ಕಾಲೇಜುಗಳಲ್ಲಿ ನಡೆಸುತ್ತಿದೆ. ವಿಶೇಷ ಉಪನ್ಯಾಸಗಳ ಜೊತೆಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ, ಅಶು ಭಾಷಣ ಹಾಗೂ ಕವನ ವಾಚನ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಆಯುಕ್ತ ವೆಂಕಟರಾಜು, ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರಾಧಾಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀನಿವಾಸ್, ರವಿ ಭಾಗವಹಿಸಿದ್ದರು.20ಕೆಡಿಬಿಪಿ2-
ದೊಡ್ಡಬಳ್ಳಾಪುರದಲ್ಲಿ ನಡೆದ ಡಾ.ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.