ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯ ಸರ್ಕಾರದ ಬಹು ಆಕಾಂಕ್ಷಿ ಇ- ಖಾತಾ ಅಭಿಯಾನದಲ್ಲಿ ನಗರಸಭೆ ವ್ಯಾಪ್ತಿ ಸ್ವತ್ತುಗಳ ಮಾಲೀಕರು ಸೂಕ್ತ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಇ ಮತ್ತು ಬಿ ಸ್ವತ್ತು ಖಾತೆಗಳನ್ನು ಮಾಡಿಸಿಕೊಂಡು ಗಣಕೀಕರಣ ಮಾಡಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲ ಕರೆ ನೀಡಿದರು.ನಗರಸಭೆ ಆವರಣದಲ್ಲಿ ಇ-ಖಾತಾ ಅಭಿಯಾನ ಆಂದೋಲನ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು. ಅರಸೀಕೆರೆ ನಗರ ವ್ಯಾಪ್ತಿಯಲ್ಲಿರುವ ಸ್ವತ್ತುಗಳಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಮತ್ತು ದಾಖಲೆಗಳನ್ನು ಸಲ್ಲಿಸಿ ಗಣಕೀಕೃತದಲ್ಲಿ ದಾಖಲಿಸಿಕೊಳ್ಳಬೇಕು. ಇದು ಪ್ರತಿ ಆಸ್ತಿದಾರರ, ನಾಗರಿಕರ ಕರ್ತವ್ಯ ಮತ್ತು ಹಕ್ಕು ಆಗಿದ್ದು, ಸರ್ಕಾರವು ರಾಜ್ಯಾದ್ಯಂತ ಚಾಲನೆ ನೀಡಲಾಗಿರುವ ಇ - ಸ್ವತ್ತು ಅಭಿಯನವನ್ನು ಅರಸೀಕೆರೆ ನಗರದಲ್ಲೂ ಪ್ರಾರಂಭಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ 21 ಸಾವಿರ ಆಸ್ತಿಗಳು ದಾಖಲಾಗಿದ್ದು, ಇವುಗಳ ಪೈಕಿ 12 ಸಾವಿರ ಆಸ್ತಿಗಳು ಇ- ಸ್ವತ್ತು ಗಣಕೀಕರಣ ತಂತ್ರಾಂಶದಲ್ಲಿ ದಾಖಲಾಗಿದ್ದು, 9 ಸಾವಿರ ಆಸ್ತಿಗಳು ಇ-ಸ್ವತ್ತು ವ್ಯಾಪ್ತಿಯಲ್ಲಿ ಖಾತೆಯಾಗುವುದು ಬಾಕಿಯಲ್ಲಿದೆ. ಈ ಸಂಬಂಧ ನಮ್ಮ ಅರಸೀಕೆರೆ ನಗರಪ್ರದೇಶ ವ್ಯಾಪ್ತಿಯಲ್ಲಿ ನಗರಸಭೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಅಭಿಯಾನದ ಬಗ್ಗೆ ಅರಿವು, ಜಾಗೃತಿಗಳೊಂದಿಗೆ ದಾಖಲೆಗಳನ್ನು ಪರಿಶೀಲಿಸಿ ಇ-ಸ್ವತ್ತು ನೋಂದಣಿಗೆ ಸಹಕರಿಸಲಿದ್ದಾರೆ.
ಹತ್ತಾರು ವರ್ಷಗಳಿಂದ ದಾಖಲೆಗಳಿದ್ದರೂ ಖಾಸಗಿ ಲೇಔಟ್ ಬಡಾವಣೆಗಳ ಆಸ್ತಿ ಮತ್ತು ಗ್ರಾ.ಪಂ ವತಿಯಿಂದ ನಗರಸಭೆ ವ್ಯಾಪ್ತಿಗೆ ವರ್ಗಾವಣೆ ಆಗುವುದರೊಂದಿಗೆ ಸೂಕ್ತ ದಾಖಲೆಗಳಿದ್ದರೂ ಕೆಲವು ಕಾನೂನು ಮತ್ತು ತಂತ್ರಾಂಶಗಳ ಗೊಂದಲದಿಂದ ಖಾತೆ ಆಗದ ಸ್ವತ್ತುಗಳು ಸಾಕಷ್ಟಿದ್ದವು. ಅಂತಹ ಸ್ವತ್ತುಗಳಿಗೆ ರಾಜ್ಯ ಸರ್ಕಾರವು ಬಿ- ಖಾತೆ ಮೂಲಕ ಅವಕಾಶ ಮಾಡಿಕೊಟ್ಟಿದ್ದು, ಬಿ- ಖಾತೆಯನ್ನು ನಗರ ವ್ಯಪ್ತಿಯಲ್ಲಿ ಕನ್ವರ್ಷನ್ ಆಗದೇ ಇರುವ ಆಸ್ತಿಗಳಿಗೆ ಪ್ರಾರಂಭದ ಮೊದಲ ವರ್ಷದಲ್ಲಿ ಎರಡು ಪಟ್ಟು ಕಂದಾಯ ಕಟ್ಟಿ ಖಾತೆ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿಟ್ಟ ಸ್ಥಳ, ಉದ್ಯಾನವನಗಳನ್ನು ಹೊರತುಪಡಿಸಿ ಬಿ-ಸ್ವತ್ತು ಖಾತೆ ಮಾಡಲು ಅವಕಾಶ ನೀಡಲಾಗಿದೆ.ವಾರಸುದಾರರು ಅಥವಾ ಮಾಲೀಕರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಕಾನೂನಾತ್ಮಕವಾಗಿ ಸ್ವತ್ತಿನ ಖಾತೆ ತೆರೆಯಲು ಮತ್ತು ಗಣಕೀಕೃತ ನಮೂನೆ-3ರಲ್ಲಿ ಅವಕಾಶ ಕಲ್ಪಿಸಿದೆ. ನಗರದಾದ್ಯಂತ ಇ-ಖಾತೆ ಆಂದೋಲನವು ನಡೆಯುತ್ತಿದ್ದು, ಇದನ್ನು ಜನತೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, 2024-2025ನೇ ಸಾಲಿನ ಅಂತ್ಯದೊಳಗೆ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮತ್ತು ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಕರ್ನಾಟಕ ಪುರಸಭೆ ನಿಯಮಾವಳಿಗಳ ಪ್ರಕಾರ ಅಧಿಕೃತ ಮತ್ತು ಅನಧಿಕೃತ ಸ್ವತ್ತುಗಳ ವಹಿ ನಿರ್ವಹಣೆ ಮಾಡಬೇಕಾಗಿರುತ್ತದೆ. ಈ ಆಂದೋಲನದಲ್ಲಿ ಸ್ವತ್ತುಗಳ ಮಾಲಿಕರು ಮತ್ತು ನಗರಸಭೆ ಸದಸ್ಯರ ಪಾತ್ರ ಅತೀ ಮುಖ್ಯವಾಗಿದ್ದು, ಎಲ್ಲರ ಸಹಕಾರದಿಂದ ಆಂದೋಲನ ಯಶಸ್ಸು ಮಾಡಲು ಸಾಧ್ಯವಾಗುತ್ತದೆ ಎಂದರು.ನಗರಾಭಿವೃದ್ಧಿ ಇಲಾಖೆಯ ಆಸ್ತಿ ಕಣಜದ ತಂತ್ರಾಂಶದಲ್ಲಿ ಆಸ್ತಿ ಮಾಲೀಕರ ಸಂಪೂರ್ಣ ಮಾಹಿತಿ ಹಾಗು ದಾಖಲೆಗಳು ದಾಖಲಾಗುವುದರ ಮೂಲಕ ಭದ್ರತೆ ಹಾಗೂ ಸುರಕ್ಷತೆಯ ಖಾತರಿ ಸಿಗುತ್ತದೆ. ಕಟ್ಟಡ ಮತ್ತು ನಿವೇಶನಗಳ ಮಾಲೀಕರು ಆಸ್ತಿ ಮತ್ತು ಸ್ವತ್ತುಗಳ ಪೂರಕ ನೋಂದಾಯಿತ ದಾಖಲೆಗಳು, ಸ್ವತ್ತಿನ ಭಾವಚಿತ್ರ, ಮಾಲೀಕರ ಭಾವಚಿತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಸೇರಿದಂತೆ ವಿದ್ಯುತ್ ಬಿಲ್, ನೀರಿನ ತೆರಿಗೆ ರಸೀದಿ, ಕಟ್ಟಡ ಪರವಾನಗಿ, ಅನುಮೋದಿತ ಬಡಾವಣೆ ನಕ್ಷೆ , ಅಲಿನೇಷನ್ ಪ್ರತಿ, ಕ್ರಯಪತ್ರ, ಹಕ್ಕು ಖುಲಾಸೆ ಪತ್ರ, ದಾನ ಪತ್ರ, ವಿಭಾಗ ಪತ್ರಗಳೊಂದಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಸರ್ಕಾರದ ಅಧಿಕೃತ ಆಸ್ತಿ ಕಣಜ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ನಮೂನೆ-3ರಲ್ಲಿ ಅಧಿಕೃತ ಇ-ಖಾತೆ ನಿಮ್ಮದಾಗಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮನೋಹರ್, ಸದಸ್ಯರಾದ ದರ್ಶನ್, ಅನ್ನಪೂರ್ಣ, ಇಮ್ರಾನ್, ಕಿರಣ್ ಕುಮಾರ್, ಮುಖಂಡರಾದ ಹರೀಶ್, ಸಿಖಂದರ್, ಮಲ್ಲಿಕಾರ್ಜುನ, ಮಲ್ಲಿದೇವರಹಳ್ಳಿ ಮಂಜುನಾಥ್, ಕಂದಾಯ ನಿರೀಕ್ಷಕರಾದ ಮಂಜುನಾಥ್, ನರೇಂದ್ರ ಕುಮಾರ್, ರೇವಣ್ಣ ಸಿದ್ದಪ್ಪ, ಅನಿತಾ, ವ್ಯವಸ್ಥಾಪಕಿ ಕಲಾವತಿ, ಚಂದನ್, ಜಮೀರ್ ಪಾಷ, ಆರೋಗ್ಯ ನಿರೀಕ್ಷಕರಾದ ಲಿಂಗರಾಜು, ರೇವಣ್ಣ ಸಿದ್ದಪ್ಪ, ಕರವಸೂಲಿಗಾರರಾದ ಉಮೇಶ್, ದುರ್ಗಪ್ರಸಾದ್, ರಂಗನಾಥ್, ಧರ್ಮರಾಜ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.