ಕನ್ನಡಪ್ರಭ ವಾರ್ತೆ ಸಾವಳಗಿ
ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಚುನಾವಣೆ ಬಂದಾಗ ಅವರ ಹೆಸರು ಹೇಳುತ್ತ ನಮ್ಮನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರು ಇಡೀ ದೇಶಕ್ಕೆ ಮಾದರಿ ಆಗಿರುವ ಲೀಡರ್ ಆಗಿದ್ದರೇ ಹೊರತು ಮುಸ್ಲಿಂ ವಿರೋಧಿ ಆಗಿರಲಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶುಕ್ರವಾರ ಅಂಬಾಭವಾನಿ ಜಾತ್ರಾ ಮಹೋತ್ಸವದ 4ನೇ ದಿನ ಧರ್ಮ ಸಭೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಫ್ಜಲ್ ಖಾನ್ ಶಿವಾಜಿ ಮಹಾರಾಜರ ಆಪ್ತ ರಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಅವರಿಂದ ತೊಂದರೆ ಇದೆ ಜೊತೆಗೆ ಹೋಗುವಾಗ ಹೇಗಿರಬೇಕು ಎಂಬುವುದರ ಬಗ್ಗೆ ಮುಸ್ಲಿಂ ವ್ಯಕ್ತಿ ಶಿವಾಜಿ ಮಹಾರಾಜರಿಗೆ ಸಲಹೆ ನೀಡುತ್ತಿದ್ದ. ಅಫ್ಜಲ್‌ಖಾನ್ ಹೊಟ್ಟೆ ಹರಿಯುವ ಮಾರಕಾಸ್ತ್ರ ತಯಾರು ಮಾಡಿ ಕೊಟ್ಟಿದ್ದು ಮುಸ್ಲಿಂ ವ್ಯಕ್ತಿ. ಛತ್ರಪತಿ ಶಿವಾಜಿ ಮಹಾರಾಜರ ಮೊದಲ ಚಿತ್ರ ಬಿಡಿಸಿದವನೂ ಮುಸ್ಲಿಂ ಧರ್ಮದವ. ಶಿವಾಜಿ ಮಹಾರಾಜರ ಬಂಧನ ಮಾಡಿದ್ದ ಅಫ್ಜಲ್‌ಖಾನ್‌ನಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದು ಮುಸ್ಲಿಂ ವ್ಯಕ್ತಿ. ವಿಜಯಪುರದಲ್ಲಿ ಶಿವಾಜಿ ಮಹಾರಾಜರು ಈಶ್ವರಲಿಂಗ ದೇವಾಲಯ ನಿರ್ಮಿಸಿದರು. ಆಗ ಪ್ರಾರ್ಥನಾ ಮಂದಿರ ಕಟ್ಟಿಸಿದರು ಎಂದು ಹೇಳಿದರು.
ಇತಿಹಾಸ ತಿಳಿದುಕೊಳ್ಳಬೇಕಿದೆ:ಛತ್ರಪತಿ ಶಿವಾಜಿ ಮಹಾರಾಜರ ವಂಶದವರಾದ ನಾವು ಮೊದಲು ಇತಿಹಾಸ ತಿಳಿದುಕೊಳ್ಳಬೇಕಿದೆ, ಇತಿಹಾಸ ಅರಿಯದೇ ಹೋದರೆ ರಾಜಕಾರಣಿಗಳು ತಪ್ಪು ಮಾಹಿತಿ, ಸಂದೇಶ ನೀಡಿ ರಾಜಕೀಯ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಅವರ ಅಮೋಘ ಕಾರ್ಯವನ್ನು ಮರೆಮಾಚಿ ಅವರನ್ನು ಬರೀ ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಅಂಬೇಡ್ಕರ್ ಮತ್ತು ಬಸವಣ್ಣ ತೋರಿದ ಮಾರ್ಗದಲ್ಲಿ ನಡೆಯಬೇಕು. ಸೌಹಾರ್ದತೆ ಸಾರುವ ಛತ್ರಪತಿ ಶಿವಾಜಿ ಮಹಾರಾಜರ ಹಿಂದುತ್ವ ನಮ್ಮದಾಗಲಿ ಎಂದರು.ಕ್ಷತ್ರಿಯ ಸಮುದಾಯದ ಒಳಪಂಗಡಗಳು ಒಂದಾಗಿ ಒಂದೇ ವೇದಿಕೆಯಲ್ಲಿ ಸೇರಬೇಕು. ಸಮಾಜದಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮರಾಠ ಸಮುದಾಯದ ಶಾಸಕರು, ಸಚಿವರು ಇರುತ್ತಾರೆ. ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತದೆ ಎಂಬುದು ಎಲ್ಲರಿಗೆ ಗೊತ್ತಿದೆ. ಯಾವ ಸರ್ಕಾರ ಬಂದರೂ ಅಷ್ಟೇ, ನಾವು ಸರ್ಕಾರದಲ್ಲಿ ನಿರ್ಣಯ ಮಾಡುವಂತಹ ಶಕ್ತಿ ಇದ್ದರೆ ಮಾತ್ರ ಆ ಸರ್ಕಾರ ನಮಗೆ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದರು.
ಈ ವೇಳೆ ತಮ್ಮಣ್ಣಾಚಾರಿ ಜೋಷಿ, ವಿಪ ಸದಸ್ಯ ಡಾ.ಎಂ.ಜಿ. ಮುಳೆ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮೋಹನ ಜಾಧವ, ಸುಶೀಲಕುಮಾರ ಬೆಳಗಲಿ, ಸುನೀಲ ಶಿಂಧೆ, ಬಸವರಾಜ ಸಿಂಧೂರ, ಸಾವಳಗಿ ಗ್ರಾಪಂ ಅಧ್ಯಕ್ಷ ಸಂಜೀವ ಮಾಳಿ, ಉಮೇಶ ಜಾಧವ, ಕಾಶೀನಾಥ ಜಾಧವ ಇತರರು ಇದ್ದರು.ಛತ್ರಪತಿ ಶಿವಾಜಿ ಮಹಾರಾಜ ಇಡೀ ದೇಶಕ್ಕೆ ಮಾದರಿ ಆಗಿರುವ ಲೀಡರ್. ಸದ್ಯ ರಾಜಕೀಯ ನಾಯಕರು ತಪ್ಪು ಮಾಹಿತಿ, ಸಂದೇಶ ರವಾನಿಸಿ ತಮಗೆ ಅನುಕೂಲ ಮಾಡಿಕೊಳ್ಳುತ್ತಾರೆ. ಕ್ಷತ್ರೀಯ ಸಮುದಾಯದ ಒಳಪಂಗಡಗಳು ಒಂದಾಗಿ ಒಂದೇ ವೇದಿಕೆಯಲ್ಲಿ ಸೇರಬೇಕು.- ಸಂತೋಷ ಲಾಡ್, ಕಾರ್ಮಿಕ ಇಲಾಖೆ ಸಚಿವ