ಉಡುಪಿ: ಧೈರ್ಯ, ಶೌರ್ಯ ಹಾಗೂ ಧೀಮಂತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ಛತ್ರಪತಿ ಶಿವಾಜಿ ಅವರ ಆಡಳಿತ ಕೌಶಲ್ಯಗಳು ಅವರ ದೂರದೃಷ್ಟಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಗುರುವಾರ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಮತ್ತು ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಬಲಿಷ್ಠ ನೌಕಾಪಡೆ ಕಟ್ಟಿದ್ದರು: ಚಿಕ್ಕ ವಯಸಿನಲ್ಲಿಯೇ ಆಸಾಧಾರಣ ನಾಯಕತ್ವ ಗುಣಗಳನ್ನು ಹೊಂದಿದ್ದ ಶಿವಾಜಿಯ ಆಡಳಿತವು ಪ್ರಗತಿಪರ ನೀತಿ ಹಾಗೂ ದಕ್ಷ ಆಡಳಿತದಿಂದ ಗುರುತಿಸಲಟ್ಟಿದೆ. ಅಂದಿನ ದಿನಗಳಲ್ಲಿಯೇ ಜನರನ್ನು ಸಂವಿಧಾನದ ಅಡಿಯಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಿದ್ದರು. ವೈರಿಗಳಿಂದ ಕರಾವಳಿಯನ್ನು ರಕ್ಷಿಸಲು ಸಮುದ್ರದಲ್ಲಿ ಬಲಿಷ್ಠ ನೌಕಾಪಡೆಯನ್ನು ಸನ್ನದ್ಧಗೊಳಿಸಿದ್ದರು. ಜಾತಿ, ಧರ್ಮ, ಬೇಧಗಳನ್ನು ಮೀರಿ ಸಮಗ್ರ ಆಡಳಿತಕ್ಕೆ ಉತ್ತೇಜನ ನೀಡಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮರಾಠ ಸಮುದಾಯದ ಯುವತಿ, ಪವರ್‌ಲಿಫ್ಟಿಂಗ್ ನಲ್ಲಿ ಸಾಧನೆಗೈದ ಪ್ರತಿಕ್ಷಾ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಬಸ್ರೂರು ಶಾರದಾ ಕಾಲೇಜು ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ ವಂದಿಸಿದರು.