ಪಠ್ಯದಲ್ಲಿ ಶಿವಾಜಿ ಇತಿಹಾಸ ಬೇಕೆ ಹೊರತೂ ಅಲೆಕ್ಸಾಂಡರ್‌ನದ್ದಲ್ಲ: ಸಂಸದ ಕಾಗೇರಿ

KannadaprabhaNewsNetwork | Published : Oct 21, 2024 12:41 AM

ಸಾರಾಂಶ

ಇತಿಹಾಸ ಪುಟದಲ್ಲಿ ನಮ್ಮ ಭಾಗದಲ್ಲಿ ಆಳಿದ ಮಹಾನ್ ರಾಜರ ಇತಿಹಾಸ ಸಿಗುತ್ತಿಲ್ಲ. ಮೊಘಲರು, ಬ್ರಿಟಿಷರು, ಪೋರ್ಚುಗೀಸರ ಆಡಳಿತವನ್ನು ನಮ್ಮ ಇತಿಹಾದಲ್ಲಿ ತುಂಬಿದ್ದಾರೆ.

ಶಿರಸಿ: ಶಿವಾಜಿ ಕಿಚ್ಚೆದೆಯ ಹೋರಾಟ ಪಠ್ಯಪುಸ್ತಕದಲ್ಲಿ ಬೇಕೇ ವಿನಃ ಅಲೆಕ್ಸಾಂಡರ್ ಇತಿಹಾಸ ನಮಗೆ ಬೇಡ. ಇತಿಹಾಸ ಅರ್ಥ ಮಾಡಿಕೊಳ್ಳದಿದ್ದರೆ ವರ್ತಮಾನದಲ್ಲಿ ಸ್ಪಷ್ಟ ಹೆಜ್ಜೆ ಇಡಲು ಸಾಧ್ಯವಿಲ್ಲ. ಇತಿಹಾಸದ ಬಗ್ಗೆ ಸ್ಪಷ್ಟತೆ ಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ತಾಲೂಕಿನ ಸ್ವಾದಿ ಜೈನಮಠದಲ್ಲಿ ೨ ದಿನ ನಡೆದ ಸೋಂದಾ ಇತಿಹಾಸೋತ್ಸವ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಇತಿಹಾಸ ಪುಟದಲ್ಲಿ ನಮ್ಮ ಭಾಗದಲ್ಲಿ ಆಳಿದ ಮಹಾನ್ ರಾಜರ ಇತಿಹಾಸ ಸಿಗುತ್ತಿಲ್ಲ. ಮೋಘಲರು, ಬ್ರಿಟಿಷರು, ಪೋರ್ಚುಗೀಸರ ಆಡಳಿತವನ್ನು ನಮ್ಮ ಇತಿಹಾದಲ್ಲಿ ತುಂಬಿದ್ದಾರೆ. ನಮ್ಮ ದೇಶಕ್ಕೆ ದಂಡೆತ್ತಿ ಬಂದು ನಮ್ಮ ರಾಜರು ಸಾಮ್ರಾಜ್ಯದ ಮೇಲೆ ದಾಳಿ ಮಾಡಿರುವ ವಿಷಯ, ಕಾನೂನು ನಮಗೆ ಬೇಡ. ನಮ್ಮ ದೇಶದಲ್ಲಿ ಆಡಳಿತ ನಡೆಸಿದ ರಾಜಮನೆತನದ ಅಧ್ಯಯನ ಯುವಕರಿಗೆ ಅತ್ಯವಶ್ಯ ಎಂದರು.ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದು ಸುಲಭ. ಇತಿಹಾಸ ಸಮ್ಮೇಳನಂತಹ ವೈಚಾರಿಕತೆಯನ್ನು ಬೆಳೆಸುವ ಕಾರ್ಯಕ್ರಮ ಸಂಘಟಿಸುವುದು ಕಷ್ಟದ ಕೆಲಸ. ಆದರೆ ಇದರ ನಡುವೆ ಡಾ. ಲಕ್ಷ್ಮೀಶ ಹೆಗಡೆ ಸೋದಾ ಎಲ್ಲರನ್ನು ಒಗ್ಗೂಡಿಸಿ, ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಿರುವುದು ಅಭಿನಂದನೀಯ.

ಸೋಂದಾ ಇತಿಹಾಸವು ಪ್ರೇರಣೆ ಮತ್ತು ಚಿಂತನೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಇತಿಹಾಸವಾಗಿದೆ. ಕಷ್ಟಗಳು ಇರುವುದು ಸಹಜ. ಅದನ್ನು ಎದುರಿಸಿ, ಬದ್ಧತೆಯಿಂದ ಕೆಲಸ ಮಾಡಬೇಕು. ಸೋಂದೆ ಅರಸರ ಸಾಮ್ರಾಜ್ಯವು ವಿಜಯನಗರ ಅರಸರ ರೀತಿಯಲ್ಲಿ ಆಡಳಿತ ನಡೆದಿದೆ ಎಂಬುದನ್ನು ಇತಿಹಾಸದಿಂದ ಕೇಳಿದ್ದೇವೆ. ಇಂದಿನ ಯುವಕರಲ್ಲಿ ನಮ್ಮತನ ಅರಿವು ಮೂಡಬೇಕು. ಯುವಕರನ್ನು ಕೇಂದ್ರೀಕರಿಸಿ, ಇಂತಹ ಸಮ್ಮೇಳನ ರೂಪುಗೊಳ್ಳಬೇಕು ಎಂದರು.ಸೋಂದಾ ಜಾಗೃತ ವೇದಿಕೆ ಸಂಚಾಲಕ ಡಾ. ಲಕ್ಷ್ಮೀಶ ಹೆಗಡೆ ಸೋಂದಾ ಮಾತನಾಡಿ, ಯುವ ಸಂಶೋಧಕರಿಗೆ ಸಮ್ಮೇಳನವು ಕ್ರಿಯಾ ಜ್ಞಾನವನ್ನು ಒದಗಿಸುವ ವಾಹಕವಾಗಿ ಕೆಲಸವಾಗುತ್ತದೆ. ಪರಿಸ್ಥಿತಿ ಯಾವುದೇ ಇರಲಿ, ಸವಾಲಿನ ರೀತಿ ಸ್ವೀಕರಿಸಿ, ಸಿದ್ಧತೆ, ಬದ್ಧತೆ ಶುದ್ಧತೆಯೊಂದಿಗೆ ಸಮ್ಮೇಳನ ಮುನ್ನೆಡೆಯಬೇಕು ಎಂಬ ಆಶಯ ವ್ಯಕ್ತವಾಗಿದೆ ಎಂದರು.ಹಂಪಿ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಮರೇಶ ಯತಗಲ್ ಸಮಾರೋಪದ ಭಾಷಣ ಮಾಡಿ, ಮೌಲ್ಯಯುತ ರಾಜರು ಆಳ್ವಿಕೆ ನಡೆಸಿರುವ ರಾಜ್ಯಗಳು ಆದರ್ಶದ ರಾಜ್ಯಗಳಾಗಿವೆ. ಇಂತಹ ಸಮ್ಮೇಳನಗಳು ಗೋಷ್ಠಿಗಳ ಮೂಲಕ ಅಂತಹ ರಾಜರ ಬಗ್ಗೆ ಜನಮಾನಸದಲ್ಲಿ ತುಂಬುವ ಕಾರ್ಯ ನಡೆದಿದೆ. ಸ್ಥಳೀಯ ಇತಿಹಾಸ ರಾಷ್ಟ್ರೀಯ ಇತಿಹಾಸಕ್ಕೆ ಭದ್ರ ಬುನಾದಿ. ಸಂಶೋಧನೆಗಳನ್ನು ಗುರುತಿಸುವ ಮನಸ್ಸುಗಳ ಕೊರತೆ ಕಾಡಿದೆ. ಸಂಶೋಧಕರಿಂದ ತಪ್ಪಾಗಬಹುದು, ಆದರೆ ಸುಳ್ಳು ಹೇಳುವುದಿಲ್ಲ. ಪಿಎಚ್‌ಡಿ ಪದವಿ ಸಂಶೋಧನೆ ಮಾಡಲು ಯೋಗ್ಯ ಎಂಬ ಶಿಫಾರಸು ಪತ್ರ ಎಂದು ಪರಿಗಣಿಸಬೇಕು ಎಂದರು.ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ರಾಜಾರಾಮ ಹೆಗಡೆ, ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ರವೀಂದ್ರ ಧಾಕಪ್ಪ, ರತ್ನಾಕರ ಹೆಗಡೆ ಬಾಡಲಕೊಪ್ಪ, ಸೋಂದಾ ಗ್ರಾಪಂ ಅಧ್ಯಕ್ಷ ರಾಮಚಂದ್ರ ಹೆಗಡೆ ಹೊಸಗದ್ದೆ, ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಜೈನ ಮಠದ ಕಾರ್ಯದರ್ಶಿ ಸುರೇಖಾ ಸೂರ್ಯವಂಶಿ, ರಾಜರಾಜೇಶ್ವರಿ ಯುವಕ ಮಂಡಳದ ಅಧ್ಯಕ್ಷ ಪ್ರಶಾಂತ ಹೆಗಡೆ ಬಾಡಲಕೊಪ್ಪ ಸೇರಿದಂತೆ ಮತ್ತಿತರರು ಇದ್ದರು.

Share this article