ಕುರುಗೋಡು: ಮೊದಲು ಕನ್ನಡ ಎಂಬುದು ಕಾವೇರಿಯಿಂದ ಗೋದಾವರಿವರೆಗೆ ಹರಡಿತ್ತು. ಕರುನಾಡು ದೊಡ್ಡ ಸಾಮ್ರಾಜ್ಯವಾಗಿತ್ತು ಎಂದು ತಹಶೀಲ್ದಾರ್ ನರಸಪ್ಪ ಹೇಳಿದರು.
ಭಾಷಾವಾರು ವಿಂಗಡಣೆ ನಂತರ ಕನ್ನಡ ಭಾಷೆಯನ್ನು ಅತ್ಯಂತ ಹೆಚ್ಚಾಗಿ ಉಳಿಸಿಕೊಂಡ ಬಂದಿರುವ ನಮ್ಮ ಗಡಿನಾಡು ಬಳ್ಳಾರಿ ಜಿಲ್ಲೆಯ ವಿಶೇಷತೆ. ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಿದ ಗಡಿಭಾಗದ ಬಳ್ಳಾರಿ ಜಿಲ್ಲೆಯಲ್ಲಿ ನಾವು ಜೀವಿಸುತ್ತಿರುವುದೇ ಪೂರ್ವಜನ್ಮದ ಸುಕೃತದ ಫಲ ಎಂದು ಬಣ್ಣಿಸಿದರು.
ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ಎಲ್ಲರೂ ಪಕ್ಷ, ಜಾತಿ-ಮತ ಪಂಥ ಮರೆತು ಶ್ರಮಿಸಬೇಕುಎಂದು ಸಲಹೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾನತಾಡಿ, ಕನ್ನಡ ತಾಯಿ ಭುವನೇಶ್ವರಿ ರಥಯಾತ್ರೆಗೆ ಪ್ರತಿ ತಾಲೂಕಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದೆ. ಮಂಡ್ಯ ನಗರದಲ್ಲಿ ಜರುಗುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರು ಭಾಗವಹಿಸಿ ಎಂದು ಹೇಳಿದರು.
ತಾಲೂಕು ಆಡಳಿತ, ಪುರಸಭೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಕನ್ನಡತಾಯಿ ಭುವನೇಶ್ವರಿ ರಥಯಾತ್ರೆಯನ್ನು ಪಟ್ಟಣದ ಗೆಣಿಕೆಹಾಳು ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸಂಭ್ರಮದಿಂದ ಸ್ವಾಗತಿಸಿದರು.
ಗೆಣಿಕೆಹಾಳು ರಸ್ತೆಯಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳ ಸಂಚರಿಸಿ ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡಿತು.
ಕನ್ನಡ ತಾಯಿ ಭುವನೇಶ್ವರಿ ರಥಯಾತ್ರೆ ಸಾಗಿ ಬಂದ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಸಾವಿರಾರು ಸಂಖ್ಯೆಯ ಜನರು ಮೆರವಣಿಗೆ ಸೊಬಗು ಕಣ್ತುಂಬಿಕೊ೦ಡು ಸಂಭ್ರಮಿಸಿದರು.