ಅರಸೀಕೆರೆ: ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳನ್ನು ಅನುಭವಿಸುವುದಲ್ಲ, ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಗೌರವಿಸಿ ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯ ನಿರ್ವಹಿಸುವುದಾಗಿದೆ ಎಂದು ಖ್ಯಾತ ವೈದ್ಯ ಡಾ. ಶಿವಕುಮಾರ್ ಹೇಳಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರ ಆಶಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು. ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಬಳಸಿಕೊಳ್ಳದೆ, ಸಂವಿಧಾನದ ಆಶಯಗಳನ್ನು ಗೌರವಿಸುವ ಮೂಲಕ ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತಹ ವಾತಾವರಣ ನಿರ್ಮಾಣವಾಗಬೇಕು. ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಕಲ್ಪಿಸುವುದು ಅಗತ್ಯ ಎಂದು ತಿಳಿಸಿದರು.ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿ, ಶಿಸ್ತು ಮತ್ತು ದೇಶಾಭಿಮಾನವನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಬಲಿಷ್ಠ ಹಾಗೂ ಸಮರ್ಥ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಡಾ. ಶಿವಕುಮಾರ್ ಕರೆ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಆನಂದ್ ಹಾಗೂ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಸ್.ವಿ. ನವೀನ್ ಕುಮಾರ್, ಕಾರ್ಯದರ್ಶಿ ಟಿ.ಎ. ಸ್ವಾಮಿ, ಮಾಜಿ ಅಧ್ಯಕ್ಷ ರಾಮಚಂದ್ರ, ಪತ್ರಕರ್ತರಾದ ಸೀತಾರಾಮ್, ಆನಂದ್ ಕೌಶಿಕ್, ನಿರ್ದೇಶಕರಾದ ವಿಜಯಕುಮಾರ್, ಜಗದೀಶ್, ಸತೀಶ್, ಸಂಪಾದಕರಾದ ನಾಗರಾಜ್ ಶೆಟ್ಟಿ, ಹರಿಪ್ರಸಾದ್, ಜೀವನ್, ಬಸವರಾಜು, ಮೋಹಿದೀನ್, ಗಂಡಸಿ ವಿಜಯ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.