ಕನ್ನಡಪ್ರಭ ವಾರ್ತೆ ಮಂಡ್ಯ
ಸೋಮವಾರ ಒಕ್ಕೂಟದ ಆಡಳಿತ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ೫ ರಿಂದ ೧೦ ಕೋಟಿ ರು. ವೆಚ್ಚದಲ್ಲಿ ಮನ್‌ಮುಲ್ ಆವರಣದಲ್ಲಿ ಬೆಣ್ಣೆ ಸಂಗ್ರಹ ಘಟಕ ಸ್ಥಾಪಿಸಲು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.
ನಮ್ಮಲ್ಲಿ ಉತ್ಪಾದನೆಯಾಗುವ ಬೆಣ್ಣೆಯನ್ನು ದಾಸ್ತಾನು ಮಾಡಲು ಶೈತ್ಯಾಗಾರ ಇಲ್ಲದ ಕಾರಣ ನಾವು ಬೇರೆ ಒಕ್ಕೂಟದಲ್ಲಿ ದಾಸ್ತಾನು ಮಾಡುವ ಸ್ಥಿತಿ ಇತ್ತು. ಇದರಿಂದ ಒಕ್ಕೂಟಕ್ಕೆ ಆರ್ಥಿಕ ಹೊರೆಯಾಗಿತ್ತು. ನಮ್ಮದೇ ಘಟಕ ಸ್ಥಾಪಿಸಿ ಸಂಗ್ರಹಿಸಿದಲ್ಲಿ ಖರ್ಚು ಕಡಿಮೆಯಾಗಲಿದೆ ಎಂದರು.ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಶ್ರೀರಂಗಪಟ್ಟಣದ ಬಳಿ ಜಮೀನು ಖರೀದಿಸಲಾಗಿದ್ದು, ಅಲ್ಲಿ ಗ್ರಾಮೀಣ ರೈತ ಮಕ್ಕಳಿಗೆ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಕಡಿಮೆ ದರದಲ್ಲಿ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಬೆಂಗಳೂರಿನ ಕೆಎಂಎಫ್ ಗೋದಾಮಿನಿಂದ ಹಾಲಿನ ಉತ್ಪನ್ನಗಳನ್ನು ಗೆಜ್ಜಲಗೆರೆಯ ಮನ್‌ಮುಲ್ ಆವರಣಕ್ಕೆ ತಂದು ಅದನ್ನು ಮತ್ತೆ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿತ್ತು. ಹಾಲಿನ ಉತ್ಪನ್ನಗಳನ್ನು ದಾಸ್ತಾನು ಮಾಡಲು ಕೋಣನಕುಂಟೆ ಘಟಕ ಸ್ಥಳವನ್ನು ಗೋದಾಮು ಮಾಡಿಕೊಂಡು ಅಲ್ಲಿಂದಲೇ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ಉಂಟಾಗುವ ಸಾಗಾಣಿಕೆ ವೆಚ್ಚವನ್ನು ತಡೆಯಬಹುದಾಗಿದೆ ಎಂದು ವಿವರಿಸಿದರು.
ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಅಲ್ಲಿನ ಆಡಳಿತ ಮಂಡಳಿಗಳು ಮುಂದೆ ಬಂದು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕೇವಲ ಹಾಲು ಸಂಗ್ರಹಕ್ಕೆ ಮಾತ್ರ ಸೀಮಿತವಾಗುವುದನ್ನು ಬಿಡಬೇಕು ಎಂದರು.
ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಲಕ್ಷ್ಮೀನಾರಾಯಣ, ಬಿ. ಬೋರೇಗೌಡ, ಟಿ.ಶಿವಕುಮಾರ, ಎಸ್.ಪಿ. ಸ್ವಾಮಿ, ವಿಶ್ವಾಸ್, ಹರೀಶ್‌ಬಾಬು, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್, ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ.ಮಂಜೇಶ್ ಹಾಜರಿದ್ದರು.