ಶಿವಮೊಗ್ಗವೇ ನನ್ನ ಕರ್ಮ ಭೂಮಿ: ಬಿ.ಎಸ್. ಯಡಿಯೂರಪ್ಪ

KannadaprabhaNewsNetwork |  
Published : Aug 17, 2026, 01:45 AM IST
ಪೊಟೋ: 16ಎಸ್ಎಂಜಿಕೆಪಿ06ಶಿವಮೊಗ್ಗದ ನಗರದ ಡಿವಿಷನ್ ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯದ ಟ್ರಸ್ಟ್ ಹಾಗೂ ಎನ್‌ಡಿವಿ ಹಾಸ್ಟೆಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ನೂತನ  ‘ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯವನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಲ್ಲಮಪ್ರಭು, ಅಕ್ಕಮಹಾದೇವಿ, ಕುವೆಂಪು ಹಾಗೂ ಶಾಂತವೇರಿ ಗೋಪಾಲಗೌಡರಂತಹ ಮಹನೀಯರನ್ನು ನಾಡಿಗೆ ನೀಡಿದ ಪುಣ್ಯಭೂಮಿ ಶಿವಮೊಗ್ಗ. ನನ್ನ ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜಿಲ್ಲೆಯ ಜನತೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಿವಮೊಗ್ಗವೇ ನನ್ನ ಕರ್ಮಭೂಮಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವುಕವಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಲ್ಲಮಪ್ರಭು, ಅಕ್ಕಮಹಾದೇವಿ, ಕುವೆಂಪು ಹಾಗೂ ಶಾಂತವೇರಿ ಗೋಪಾಲಗೌಡರಂತಹ ಮಹನೀಯರನ್ನು ನಾಡಿಗೆ ನೀಡಿದ ಪುಣ್ಯಭೂಮಿ ಶಿವಮೊಗ್ಗ. ನನ್ನ ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜಿಲ್ಲೆಯ ಜನತೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಿವಮೊಗ್ಗವೇ ನನ್ನ ಕರ್ಮಭೂಮಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವುಕವಾಗಿ ಹೇಳಿದರು.

ನಗರದ ಡಿವಿಷನ್ ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯದ ಟ್ರಸ್ಟ್ ಹಾಗೂ ಎನ್‌ಡಿವಿ ಹಾಸ್ಟೆಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ನೂತನ ‘ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗ ನಗರಕ್ಕೆ ದೂರದೂರಿನಿಂದ ಬರುತ್ತಿದ್ದ ಅನೇಕ ವಿದ್ಯಾರ್ಥಿಗಳು ವಸತಿ ಮತ್ತು ಊಟದ ವ್ಯವಸ್ಥೆಯಿಲ್ಲದೆ ಎದುರಿಸುತ್ತಿದ್ದ ಸಂಕಷ್ಟವನ್ನು ತಾವು ಹತ್ತಿರದಿಂದ ಕಂಡಿದ್ದೇನೆ. ಯಾವೊಬ್ಬ ವಿದ್ಯಾರ್ಥಿಯೂ ವಸತಿ ಅಥವಾ ಊಟದ ಕೊರತೆಯಿಂದ ಶಿಕ್ಷಣದಿಂದ ವಂಚಿತವಾಗಬಾರದು. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಕರ್ತವ್ಯವೂ ಆಗಿದೆ ಎಂದು ಹೇಳಿದರು.

ಆ ಅನುದಾನ ಸಮಾಜದ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸರ್ಕಾರ ಸಲ್ಲಿಸಬೇಕಾದ ಕನಿಷ್ಠ ಕರ್ತವ್ಯವಾಗಿತ್ತು. ಬಸವಾದಿ ಶರಣರು ಹಾಗೂ ವೀರಶೈವ ಸಿದ್ಧಾಂತ ದಾಸೋಹದ ಮಹತ್ವವನ್ನು ನಮಗೆ ಕಲಿಸಿವೆ ಎಂದರು.

ಈ ವಿದ್ಯಾರ್ಥಿ ನಿಲಯದಲ್ಲಿ ಪಿ. ಲಂಕೇಶ್, ಪ್ರೊ. ನಂಜುಂಡಸ್ವಾಮಿ, ಎಚ್.ಎಸ್. ದ್ವಾರಕಾನಾಥ್ ಸೇರಿದಂತೆ ಅನೇಕ ಗಣ್ಯರು ವಿದ್ಯಾಭ್ಯಾಸ ಮಾಡಿ ಬೆಳೆದಿದ್ದಾರೆ. ನೂತನ ಕಟ್ಟಡದ ಸೌಲಭ್ಯದಿಂದ ಮುಂದಿನ ದಿನಗಳಲ್ಲಿ ನಾಡಿಗೆ ನೂರಾರು ನಾಯಕರು, ಸಾಧಕರು ಹಾಗೂ ಸಮಾಜಮುಖಿ ವ್ಯಕ್ತಿಗಳು ಹೊರಬರಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಹಿರಿಯರು ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ ಮಾಡುವ ಉದ್ದೇಶದಿಂದ ಅತ್ಯಾಧುನಿಕ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿರುವುದು ಶ್ಲಾಘನೀಯ. 2021ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರು. ಅನುದಾನ ನೀಡಿದ್ದನ್ನು ಸ್ಮರಿಸಿದರು.

ಸಮಾಜದ ಬೇಡಿಕೆಗಳು ಹಲವಾರು ಇವೆ. ತಮ್ಮ ತಂದೆಯವರ ಹಾರೈಕೆಯಿಂದ ಸಂಸದನಾಗಿ ಸಮಾಜದ ಬೇಡಿಕೆಗಳಿಗೆ ಸಾಧ್ಯವಾದಷ್ಟು ಸ್ಪಂದಿಸುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ವೀರಶೈವ ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ವಿಪ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಅವರ ಮೇಲೆ ಸಮಾಜಕ್ಕಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.

ಕಟ್ಟಡ ಸಮಿತಿ ಅಧ್ಯಕ್ಷರು ಹಾಗೂ ವಿಪ ಮಾಜಿ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ನೂತನ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಸ್ತುತ ಎರಡು ಅಂತಸ್ತುಗಳಲ್ಲಿ ವಿದ್ಯಾರ್ಥಿ ನಿಲಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೂರನೇ ಅಂತಸ್ತು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಸಮಾಜದ ಯುವಕರು ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಬಂದರೆ ಅವರಿಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಟ್ರಸ್ಟ್ ಅಧ್ಯಕ್ಷ ಆಯನೂರು ಮಂಜುನಾಥ್, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಎಸ್.ಎನ್. ಚನ್ನಬಸಪ್ಪ, ಸಮಾಜದ ಮುಖಂಡರಾದ ಎಸ್.ಎಸ್. ಜ್ಯೋತಿಪ್ರಕಾಶ್, ಓಂಕಾರಪ್ಪ, ವಿರೂಪಾಕ್ಷಪ್ಪ, ಪಿ. ರುದ್ರೇಶ್, ಇ. ವಿಶ್ವಾಸ್, ಎಚ್.ವಿ. ಮಹೇಶ್ವರಪ್ಪ, ಹಿರಿಯ ವಕೀಲ ಕೆ. ಬಸಪ್ಪ ಗೌಡ, ಎಂ. ಹಾಲಪ್ಪ, ನಂಜುಂಡ ಶೆಟ್ಟರು, ಚಂದ್ರಶೇಖರ್ ಡಿ.ಎಸ್., ಪ್ರಕಾಶ್ ಕೆ.ಆರ್., ಕೆ.ಬಿ. ರಾಮಲಿಂಗಪ್ಪ, ಎಸ್.ಎಂ. ಓಂಕಾರಮೂರ್ತಿ, ಬಾಳೆಕಾಯಿ ಮೋಹನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

----

ಶತಮಾನ ಪೂರೈಸಿರುವ ಶಿವಮೊಗ್ಗದ ವಿದ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ತಮ್ಮ ಹೆಸರನ್ನು ಇಟ್ಟಿರುವುದು ವೈಯಕ್ತಿಕವಾಗಿ ದೊರೆತ ದೊಡ್ಡ ಗೌರವ. ಈ ಗೌರವವನ್ನು ನನ್ನ ವೈಯಕ್ತಿಕ ಹೆಸರಿಗಿಂತಲೂ ಹೆಚ್ಚಾಗಿ ಜನರು ನೀಡಿರುವ ಪ್ರೀತಿ, ವಿಶ್ವಾಸ, ಅಭಿಮಾನ ಮತ್ತು ಆಶೀರ್ವಾದದ ಸಂಕೇತವಾಗಿ ಸ್ವೀಕರಿಸುತ್ತೇನೆ.

-ಬಿ.ಎಸ್ ಯಡಿಯೂರಪ್ಪ.ಮಾಜಿ ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ
ಏತ ನೀರಾವರಿಗೆ ಶಾಸಕ ಮಂಜು ಚಾಲನೆ