ನರಗುಂದ: ಅಪ್ರತಿಮ ಹೋರಾಟಗಾರರು ಶಿವಮೂರ್ತಯ್ಯ ಸುರೇಬಾನ ಅವರ ಚಿಂತನೆಗಳು ಅಜರಾಮರ ಎಂದು ಶಿಕ್ಷಕ ವಿನಾಯಕ ಶಾಲದಾರ ಹೇಳಿದರು.
ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ಶಿವಮೂರ್ತಯ್ಯನವರು ನಿವೃತ್ತಿಯ ಆನಂತರ ಅಳವಂಡಿ ಶಿವಮೂರ್ತಿಸ್ವಾಮಿಗಳ ಅನುಯಾಯಿಗಳಾಗಿ ಅವರ ಪ್ರಭಾವದಿಂದ ಹುಬ್ಬಳ್ಳಿ ಗಲಭೆ ಮತ್ತು ತುಂಗಭದ್ರಾ ನದಿ ನೀರು ಹೋರಾಟದ ಮೂಲಕ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡಿದ್ದ ಅವರ ಪಾತ್ರ ಹಿರಿದಾದುದು ಎಂದು ಅವರು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನ ಮೂಲಕ ಈ ಭಾಗದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರೆ ಶಿವಮೂರ್ತಯ್ಯನವರು. ಸಾಮಾಜಿಕ ಜೀವಿಗಳಾಗಿದ್ದ ಅವರು ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿರುತ್ತಿದ್ದರು. 1980ರಲ್ಲಿ ರೈತರ ವಿವಿಧ ಬೇಡಿಕೆಗಳಿಗಾಗಿ ನಡೆದ ಹೋರಾಟದಲ್ಲಿ ಸಕ್ರಿಯರಾಗಿದ್ದ ಶಿವಮೂರ್ತಯ್ಯನವರು ಎರಡನೇ ಮಹಾಯುದ್ಧದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಅವರು ಅಪ್ರತಿಮ ದೇಶಾಭಿಮಾನಿ ಹಾಗೂ ನಾಡಿಭಿಮಾನಿಗಳಾಗಿದ್ದರು. ಶಿವಮೂರ್ತಯ್ಯನವರ ಹೋರಾಟದ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಏಕೀಕರಣ ಪ್ರಶಸ್ತಿ ಪಡೆದ ಅವರು ಬಂಡಾಯದ ನಾಡಿನ ತಾಯಿ ಕನ್ನಡಾಂಭೆಯ ಹೆಮ್ಮೆಯ ಪುತ್ರರಾಗಿದ್ದರು ಎಂದು ಹೇಳಿದರು.ಮಹೇಶ್ವರಯ್ಯ ಸುರೇಬಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಮ್ಮಣ್ಣ ಆನೇಗುಂದಿ, ಡಾ. ಬಿ.ಎಸ್. ಕೋನನ್ನವರ, ಮಲ್ಲಪ್ಪ ಅರೇಬೆಂಚಿ, ನಿವೃತ್ತ ಮುಖ್ಯೋಪಾಧ್ಯಾಯ ವೀರಯ್ಯ ಸಾಲಿಮಠ, ಈರಣ್ಣ ಐನಾಪುರ, ಮಹಾಂತೇಶ ಹಿರೇಮಠ ಇದ್ದರು.