ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಈ ವೇಳೆ ಮಾಜಿ ಸಚಿವ ಶಿವಾನಂದ ಕೌಜಲಗಿ ಮಾತನಾಡಿ, ನನ್ನ ಸಂಸದ, ಮುಖ್ಯ ಸಚೇತಕ ಅಧಿಕಾರ ಅವಧಿಯಲ್ಲಿ ಬೈಲಹೊಂಗಲ ನಾಡಿನ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಈ ಭಾಗದ ಧಾರ್ಮಿಕ ಕ್ಷೇತ್ರಗಳಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ತೃಪ್ತಿ ನನಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಂದು ಪ್ರಧಾನಿ ಎಚ್.ಡಿ.ದೇವೆಗೌಡ ಅವರೊಂದಿಗೆ ಚರ್ಚಿಸಿ ಕನ್ನಡದಲ್ಲಿ ಕಲಾಪಗಳಲ್ಲಿ ಚರ್ಚೆ ಮಾಡಲು ನಿರ್ಣಯ ಕೈಗೊಂಡು ಅವಕಾಶ ಕಲ್ಪಿಸಿಕೊಟ್ಟಿದ್ದು ನನಗೆ ಸಂತಸ ನೀಡಿದೆ. ಕಾಯಕಯೋಗಿ ನಾಗನೂರು ಡಾ.ಶಿವಬಸವ ಮಹಾಸ್ವಾಮೀಜಿಗಳು ಧಾರ್ಮಿಕ, ಶೈಕ್ಷಣಿಕ ಸೇವೆಯನ್ನು ಯಾರೂ ಮಾಡದ ಸಂದರ್ಭದಲ್ಲಿ ಮಾಡಿದ್ದಾರೆ. ಅಂತಹ ಶ್ರೀಗಳಿಗೆ ಮರಣೋತ್ತರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ವಿನಂತಿಸಿದ್ದೇನೆ ಇದನ್ನು ಸಾಕಾರಗೊಳಿಸಬೇಕೆಂದರು.
₹149 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಎಂಟು ಏತನೀರಾವರಿ ಯೋಜನೆ ಪುನಶ್ಚೇತನವಾದರೆ 83 ಹಳ್ಳಿಗಳ ಜಮೀನುಗಳಿಗೆ ಶೀಘ್ರ ನೀರಾವರಿ ಯೋಜನೆ ಪ್ರಾರಂಭವಾಗಲಿದೆ. ಅಲ್ಲದೆ ಮುಳುಗಡೆಯಾದ ಜಮೀನುಗಳ ಖಾಲಿ ಉಳಿದ ಈ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಬರುವ ಆದಾಯದಲ್ಲಿ ಯೋಜನೆ ಜಾರಿ ಮಾಡುವ ವ್ಯಕ್ತಿಗೆ ಅರ್ಧಭಾಗ ಹೋದರೆ, ಇನ್ನರ್ಧ ಜಮೀನು ಕಳೆದುಕೊಂಡ ರೈತ ಮತ್ತು ಸರ್ಕಾರ ಸಮನಾಗಿ ಹಂಚಿಕೊಳ್ಳುವ ವಿಶಿಷ್ಟ ಯೋಜನೆ ಇದಾಗಿದೆ ಎಂದರು. ನಾನು ಸಂಸದರಾಗಿದ್ದ ಅವಧಿಯಲ್ಲಿ ಅಂದಿನ ಪ್ರಧಾನಿ ಎಚ್.ಡಿ.ದೇವೆಗೌಡರಿಂದ ಕಿತ್ತೂರು-ಧಾರವಾಡ ವಾಯಾ ಬೈಲಹೊಂಗಲ, ಮುರಗೋಡ, ಶ್ರೀ ಕ್ಷೇತ್ರ ಸೊಗಲ, ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡ ಈ ಹೊಸ ರೇಲ್ವೆ ಲೈನ್‌ಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಸರ್ವೇ ಕಾರ್ಯಕ್ಕೆ ಒಪ್ಪಿಗೆ ನೀಡಿದ್ದರು. ಇಂದು ಈ ಮಾರ್ಗ ಬದಲಿಸಿ ಬೆಳಗಾವಿ ಕಿತ್ತೂರು ಧಾರವಾಡ ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕೇಂದ್ರ ಸರ್ಕಾರ ಇದನ್ನು ಪುನರ ಪರಿಶೀಲಿಸಿ ಮಾಜಿ ಪ್ರಧಾನಿ ಅವರು ಶಿಲಾನ್ಯಾಸ ಕೈಕೊಂಡ ಕಾಮಗಾರಿಗೆ ಗೌರವ ನೀಡಿ ಪ್ರಾರಂಭಿಸಬೇಕು ಎಂದರು.ಈ ವೇಳೆ ಮುಖಂಡರಾದ ಮಹೇಶ ಬೆಲ್ಲದ, ಮಹಾಂತೇಶ ಕಳ್ಳಿಬಡ್ಡಿ ಮಾತನಾಡಿ, ಕಳಂಕರಹಿತ, ಅಜಾತಶತ್ರು ರಾಜಕಾರಣದ ಮೂಲಕ ಜನಸೇವೆಯನ್ನು ಮಾಡುತ್ತಾ ಜನತೆಯ ಮನ ಗೆದ್ದಿರುವ ಕೌಜಲಗಿ ಕುಟುಂಬ ಇಂದಿನ ರಾಜಕಾರಣಕ್ಕೆ ಮಾದರಿಯಾಗಿದೆ. ಮಾಜಿ ಸಚಿವ ದಿ.ಹೇಮಪ್ಪ ಕೌಜಲಗಿ ಅವರ ಅಧಿಕಾರ ಅವಧಿಯಲ್ಲಿ ಕೈಕೊಂಡ ಮಲಪ್ರಭಾ ಯೋಜನೆಯ ನವಿಲುತೀರ್ಥ ಡ್ಯಾಂ ಕಾಮಗಾರಿ ಬೆಳಗಾವಿ, ಧಾರವಾಡ, ಬಾಗಲಕೋಟ ವಿಜಯಪೂರ ಜಿಲ್ಲೆಯ ರೈತರಿಗೆ ನೀರಾವರಿ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಆಸರೆಯಾಗಿದೆ. ಎಂಟು ಏತ ನೀರಾವರಿ ಯೋಜನೆಗಳು ರೈತರಿಗೆ ವರದಾನವಾಗಿ, ಕೌಜಲಗಿ ಕುಟುಂಬ ರೈತರ ಮನದಲ್ಲಿ ನೆಲೆಯೂರುವಂತೆ ಮಾಡಿದೆ ಎಂದರು.
ಮಾಜಿ ಸಂಸದ ಶಿವಾನಂದ ಕೌಜಲಗಿ ಅವರ ಅಭಿಮಾನಿಗಳು ಹೂಮಾಲೆ, ಹೂಗೂಚ್ಛ ನೀಡಿ, ಶುಭ ಕೋರಿದರು. ಅಭಿಮಾನಿ ಬಳಗದವರು ಕೇಕ್ ಕತ್ತರಿಸಿ ಸಂಭ್ರಮಪಟ್ಟರು.