ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಂ.ಜಿ. ರಸ್ತೆ ಬಳಿ ಇರುವ ಗಾಂಧೀ ಭವನದಲ್ಲಿ ಸವಿತಾ ಯೋಗೀಶ್ ಅವರ ಚೊಚ್ಚಲ ಕಾಡು ಕುಸುಮ ಎನ್ನುವ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕವನ ಬರೆದ ಈ ಮಹತ್ವದ ಪ್ರಯತ್ನಕ್ಕೆ ಸವಿತಾ ಯೋಗಿಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಾಹಿತ್ಯ ಕೃಷಿ ಎಲ್ಲರಿಗೂ ಒಲಿಯುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಘಟನೆಗಳನ್ನು ಕಂಡಾಗ ಹೇಳಬೇಕೆನಿಸುತ್ತದೆ. ಆದರೆ ಅದನ್ನು ಹೇಗೆ ಅಭಿವ್ಯಕ್ತಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲ. ಅನೇಕ ಜನರ ಮನಸ್ಸಿನಲ್ಲಿ ಭಾವನೆಗಳು, ಆಲೋಚನೆಗಳು ಹುಟ್ಟುತ್ತವೆ. ಆದರೆ ಅವುಗಳನ್ನು ಹೊರಹಾಕುವ ಮಾರ್ಗ ಕಂಡುಕೊಳ್ಳುವುದು ಕಷ್ಟ. ಆಂತರಿಕ ಚಿಂತನೆಗಳನ್ನು ಬರವಣಿಗೆ, ಸಾಹಿತ್ಯ, ಕಲೆ ಅಥವಾ ಹಾಡಿನ ಮೂಲಕ ಹೊರತರುವುದೇ ನಿಜವಾದ ಕಲೆ ಎಂದರು. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಅಡಗಿದೆ. ಆದರೆ ಯಾವ ಕಲೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಮುಂದಿನ ದಾರಿ ನಿಂತಿರುತ್ತದೆ. ಆಯ್ಕೆ ಮಾಡಿಕೊಂಡ ಬಳಿಕ ಅದರಲ್ಲಿ ಧೃತಿಗೆಡದೇ ನಿರಂತರ ಪ್ರಯಾಣ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸವಿತಾ ಯೋಗಿಶ್ ಅವರ ‘ಕಾಡು ಕುಸುಮ’ ಕವನ ಸಂಕಲನ ಬಿಡುಗಡೆಯಾಗಿದ್ದು, ಈ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಬಾರದು. ನಿರಂತರ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಬಹುದು ಎಂದು ಕಿವಿಮಾತು ಹೇಳಿದರು.
ಕವಿತೆಗಳು ಪ್ರೀತಿ, ಸಂಕಷ್ಟ, ಸಂಘರ್ಷದ ಕಾಲಘಟ್ಟದಲ್ಲಿ ಹುಟ್ಟುತ್ತವೆ. ಸಮಾಜದಲ್ಲಿರುವ ಅಸಮಾನತೆಗಳಿಗೆ ಪ್ರತಿಕ್ರಿಯಿಸುವುದೇ ಸಾಹಿತ್ಯದ ಕೆಲಸ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕಾಲಘಟ್ಟದ ಕವಿತೆಗಳ ಉದ್ದೇಶವೇ ಬೇರೆ. ೮೦ರ ದಶಕದ ರೈತ ಚಳವಳಿ, ಇಂದಿನ ಸಾಮಾಜಿಕ ಸ್ಥಿತಿಗತಿಗಳಲ್ಲಿ ಬರೆಯುವ ಲೇಖಕರ ಧ್ವನಿ ವಿಭಿನ್ನವಾಗಿದೆ. ಹಿಂದಿನ ಕಾಲದಲ್ಲಿ ಸರಳ ಜೀವನವೇ ಆದರ್ಶವಾಗಿದ್ದರೆ, ಇಂದಿನ ಸಮಾಜ ‘ನನಗೆ ಎಲ್ಲವೂ ಬೇಕು’ ಎನ್ನುವ ಹಂತಕ್ಕೆ ಬಂದು ನಿಂತಿದೆ. ಇದು ವಿನಾಶದ ದಾರಿಯೋ ಅಥವಾ ಹೊಸ ಬದಲಾವಣೆಯ ಆರಂಭವೋ ಎಂಬ ಪ್ರಶ್ನೆ ನಮ್ಮ ಮುಂದಿದೆ. ಸಂಘರ್ಷದ ಮಧ್ಯೆ ಶಾಂತಿಯನ್ನು ಹುಡುಕುವ ಕೆಲಸ ಸಾಹಿತ್ಯದಿಂದ ಸಾಧ್ಯ ಎಂದು ಹೇಳಿದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ. ಮದನ್ ಗೌಡ ಅವರು ‘ಕಾಡು ಕುಸುಮ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿ, ವ್ಯಕ್ತಿಯಲ್ಲಿರುವ ಶಕ್ತಿಯನ್ನು ನಂಬಿ ಮುನ್ನಡೆದರೆ ಸಾಧನೆ ಸಾಧ್ಯ ಎಂಬುದಕ್ಕೆ ಸವಿತಾ ಯೋಗಿಶ್ ಅವರ ಕೃತಿ ಉತ್ತಮ ಉದಾಹರಣೆ. ಇಂತಹ ಬರಹಗಳು ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕುಮಾರ್ ಸೇರಿದಂತೆ ಇತರರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ನೋಡುಗರ ಗಮನ ಸೆಳೆದರು. ಇದಕ್ಕೆ ಮೊದಲು ಗಾಂಧಿ ಭವನದ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶ ರವಿಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ, ಮಾಜಿ ಅಧ್ಯಕ್ಷ ರವಿನಾಕಲಗೂಡು, ಸಾಹಿತಿ ಬೇಲೂರು ರಘು ನಂದನ್, ಕೊಟ್ರೇಶ್ ಎಸ್. ಉಪ್ಪಾರ್, ಚಲಂ ಹಾಡ್ಲಳ್ಳಿ, ಸುರೇಶ್ ಗುರುಜಿ, ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉದಯರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಾರತ್ ಸೇವಾದಳದ ವಲಯ ಸಂಘಟಕಿ ವಿ.ಎಸ್. ರಾಣಿ ಸ್ವಾಗತಿಸಿದರು.