ಗೋಕರ್ಣ: ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿಯ ಶಿವಯೋಗ ಮಹಾಪರ್ವ ದಿನವಾದ ಬುಧವಾರ ಸಹ್ರಾಸರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆತ್ಮಲಿಂಗದ ದರ್ಶನ ಪಡೆದರು. ಶಿವಧ್ಯಾನ, ಶಿವ ಸ್ತುತಿ ಜೊತೆ ಎಲ್ಲೆಡೆ ಶಿವಮಯವಾಗಿತ್ತು.
ನ್ಯಾಯಾಧೀಶರ ಭೇಟಿ:
ಮಂದಿರದ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಜಿಲ್ಲಾ ನ್ಯಾಯಲಯದ ನ್ಯಾಯಾಧೀಶ ವಿಜಯಕುಮಾರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ರಮಣಿ ಪ್ರಸಾದ, ಮಹೇಶ ಹಿರೇಗಂಗೆ, ಸುಬ್ರಹ್ಮಣ್ಯ ಅಡಿ, ಮಂದಿರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ ಉಪಸ್ಥಿತರಿದ್ದರು. ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿದ್ದರು.ವಿಶೇಷ ಉಪಹಾರ:
ಮಹಾರಾಷ್ಟ್ರದಿಂದ ಹೆಚ್ಚಿನ ಜನರು ಆಗಮಿಸುವುದರಿಂದ ಇವರಿಗಾಗಿಯೇ ಸಾಬುದಾನಿ ಕಿಚಡಿ ವಿಶೇಷ ಉಪಹಾರ ಮಾಡಲಾಯಿತು. 30 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಉಪಾಹಾರ ಸ್ವೀಕರಿಸಿದರು.
ಭದ್ರತೆಗೆ ಪೊಲೀಸ್ ಸಿಬ್ಬಂದಿ ಕೊರತೆ:
ಕಾರವಾರದ ಬಾಂಬ್ ನಿಷ್ಕ್ರಿಯ ದಳದವರು ಸಹ ಸೂಕ್ತ ನಿಗಾ ವಹಿಸಿದ್ದರು. ಆರೋಗ್ಯ ಇಲಾಖೆಯವರು ಮಂದಿರದ ಪಕ್ಕದಲ್ಲಿ ಕೌಂಟರ್ ತೆರೆದು ತುರ್ತು ಚಿಕಿತ್ಸೆ ಮತ್ತಿತರ ಮಾಹಿತಿ ನೀಡಿದರು. ಕಾರ್ಮಿಕ ಇಲಾಖೆಯವರು ಭಿಕ್ಷಾಟನೆ, ಬಾಲಕಾರ್ಮಿಕರ ಬಳಕೆಯ ಮೇಲೆ ನಿಗಾ ಇಟ್ಟಿದ್ದರು.
ಭಾವಿಕೊಡ್ಲದ ಚಂಕ್ರಖಂಡೇಶ್ವರ ದೇವಾಲಯ, ಸಿದ್ದೇಶ್ವರದ ದೇವಾಲಯ, ಕೋಟಿತೀರ್ಥಕಟ್ಟೆಯಲ್ಲಿರುವ ವರದೇಶ್ವರ, ಕುಡ್ಲೆಕಡಲತೀರದಲ್ಲಿ ಉಮಾಮಹೇಶ್ವರ ಸೇರಿದಂತೆ ಈ ಭಾಗದ ಶಿವನ ಮಂದಿರದಲ್ಲಿ ಅಸಂಖ್ಯೆ ಭಕ್ತರು ಆಗಮಿಸಿ ದೇವರ ದರ್ಶನ, ಪೂಜೆ ನೆರವೇರಿಸಿ ಪುನೀತರಾದರು.