ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಸಂಭ್ರಮದ ಶಿವರಾತ್ರಿ

KannadaprabhaNewsNetwork |  
Published : Mar 09, 2024, 01:33 AM IST
ಸಂಭ್ರಮದ ಶಿವರಾತ್ರಿ | Kannada Prabha

ಸಾರಾಂಶ

ಶಿವನನ್ನು ಆರಾಧಿಸುವ ಹಾಗೂ ಉಪವಾಸ ವ್ರತದ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಶಿವನನ್ನು ಆರಾಧಿಸುವ ಹಾಗೂ ಉಪವಾಸ ವ್ರತದ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಶಿವನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ವಿವಿಧ ಧಾರ್ಮಿಕ ಪೂಜೆಗಳೊಂದಿಗೆ ಶಿವನಾಮ ಸ್ಮರಣೆ ಮೊಳಗಿತು. ನಗರದ ಬಿ.ಎಚ್. ರಸ್ತೆಯ ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರಸ್ವಾಮಿ ದೇವಾಲಯ, ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಾಲಯ, ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿ ಮತ್ತು ಬಸವಣ್ಣ ದೇವಾಲಯ, ಅಮರಜ್ಯೋತಿ ನಗರದ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗ, ಟಿಜಿಎಂಸಿ ಬ್ಯಾಂಕ್ ಆವರಣದ ಲಕ್ಷ್ಮೀ ದೇವಾಲಯ, ಹೊರಪೇಟೆಯ ಕಾಶಿ ವಿಶ್ವನಾಥ ದೇವಾಲ ಯ, ಸಿದ್ದರಾಮೇಶ್ವರ ಬಡಾವಣೆಯ ಈಶ್ವರ ದೇವಾಲಯ, ಸರಸ್ವತಿಪುರಂ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಇಂದು ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಗರದ ಹೊರಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಮುಂಜಾನೆಯಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿತು. ಬಿ.ಎಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ಭಕ್ತರಿಗಾಗಿ ವಿಶೇಷವಾಗಿ ಶಿವನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ಕಂಡು ಬಂದಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಅಮರ ಜ್ಯೋತಿ ನಗರ ಸಾಯಿಬಾಬಾ ದೇವಾಲಯದ ಆವರಣದಲ್ಲಿರುವ ಶಿವಲಿಂಗಕ್ಕೆ ಭಕ್ತಾದಿಗಳು ಮುಂಜಾನೆಯಿಂದಲೇ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಕ್ಯಾತ್ಸಂದ್ರದ ಹರಿಹರ ಕ್ಷೇತ್ರವೆಂದೇ ಪ್ರಸಿದ್ಧವಾದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ನಾಲ್ಕು ಯಾಮದ ಪೂಜೆ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ತಾಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವ ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ನೆರವೇರಿದವು. ಬೆಳಗ್ಗೆ 6.30 ರಿಂದ 12.30 ರವರೆಗೆ ವಿಶೇಷ ಪೂಜಾದಿಗಳು ನೆರವೇರಿತು. ಶ್ರೀರಾಮನಗರದ ಅಮಾನಿಕೆರೆ ಸಮೀಪವಿರುವ ಅಖಿಲ ಉಪ್ಪಾರ ಸಂಘದ ವಿದ್ಯಾಭಿವೃದ್ಧಿ ಕಟ್ಟದ ಮೇಲ್ಭಾಗದಲ್ಲಿರುವ ಶಿವಲಿಂಗ ಮೂರ್ತಿಗೆ ಹಾಗೂ ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿಯ ಮತ್ತು ಬಸವಣ್ಣ ದೇವಾಲಯದ ಮೇಲ್ಭಾಗದಲ್ಲಿರುವ ಶಿವನ ಬೃಹತ್ ಮೂರ್ತಿಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರು ಈ ಎರಡು ಶಿವನಮೂರ್ತಿಗಳನ್ನು ಕಣ್ತುಂಬಿಕೊಂಡರು.

ಮುಂಜಾನೆಯಿಂದಲೇ ನಗರದ ಎಲ್ಲ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಂದ ಶಿವನಾಮ ಸ್ಮರಣೆ, ಭಜನೆಗಳು ಮೊಳಗಿದವು. ರಾತ್ರಿ ದೇವಾಲಯಗಳಲ್ಲಿ ಭಜನೆ, ಹರಿಕಥೆ, ದೇವರನಾಮಗಳು ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು