ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಚಂದ್ರವನ ಆಶ್ರಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.26ರಂದು ಬೆಳಿಗ್ಗೆ 6ಕ್ಕೆ ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ನವದುರ್ಗಿಯರ ಪೂಜೆ, ಪ್ರಧಾನ ಕಳಸ ಪೂಜಾಕಾರ್ಯ, ಬೆಳಿಗ್ಗೆ 7ಕ್ಕೆ ನಂಜನಗೂಡು ತಾಲೂಕಿನ ಬಸವನಪುರ ಶ್ರೀ ಮಲ್ಲನಮೂಲೆ ಮಠದ ಷ.ಬ್ರ.ಸ್ವ. ಚನ್ನಬಸವ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಸಂಜೆ 5ಕ್ಕೆ ಭಕ್ತಾಧಿಗಳಿಂದ ನಾಣ್ಯ, ನವಧಾನ್ಯ, ಅಕ್ಕಿ, ಬೆಲ್ಲಗಳಿಂದ ಶ್ರೀಗಳಿಗೆ ತುಲಾಭಾರ ಸೇವೆ ನಡೆಯಲಿದೆ. ಸಂಜೆ 6ಕ್ಕೆ ವಿಭೂತಿಮಠದ ಷ.ಬ್ರ.ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಚಂದ್ರವನ ಸಿರಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದಾರೆ. ನಂತರ ಡಿಎಂಎಸ್ ಜ್ಞಾನಕುಟೀರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.ಮಠದ ಪೀಠಾಧಿಪತಿ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಬೆಳಗಾವಿ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ, ಷ.ಬ್ರ.ಸ್ವ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮ.ನಿ.ಪ್ರ. ಕಲ್ಯಾಣ ಸ್ವಾಮೀಜಿ ದಿವ್ಯ ಸಮುಖದಲ್ಲಿ ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಉದ್ಘಾಟಿಸುವರು. ಮಾಜಿ ಶಾಸಕ ಎ.ಎಸ್. ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡಿಡಿಪಿಐ ಎಚ್. ಶಿವರಾಮೇಗೌಡ, ಬಿಇಒ ಬಿ. ಚಂದ್ರಶೇಖರ್ ಭಾಗವಹಿಸುವರು ಎಂದು ತಿಳಿಸಿದರು.
ಶ್ರೀ ತ್ರಿನೇತ್ರ ಅಂತರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರದ 3ನೇ ವರ್ಷದ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ತುಮಕೂರಿನ ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಸ್ಕೋಪ್ ಫೌಂಡೇಷನ್‌ನ ಛೇರ್‍ಮನ್ ಡಾ.ಎಲ್.ಎನ್. ಮೂರ್ತಿ ಹಲ್ಲೇಗೆರೆ, ಅಭಿನವ ಭಾರತಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನದ ಅರ್ಚಕ ಬಸವರಾಜ ಗುರೂಜಿ, ಏರೋಸ್ಪೇಸ್‌ನ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್. ಓಂಕಾರ್, ಆಯುಷ್ ಇಲಾಖೆ ನಿವೃತ್ತ ನಿರ್ದೇಶಕ ಗಾ.ನ. ಶ್ರೀಕಂಠಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಜ.28ರಂದು ಬೆಳಿಗ್ಗೆ ಮಠ ಪೀಠಾಧಿಪತಿ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗೆ ಪಾದಪೂಜೆ, ಪುಷ್ಪವೃಷ್ಟಿ, ಬಿಲ್ವಾರ್ಚನೆ, ಆರತಿ ಮತ್ತು ಗುರುವಂದನೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಧಾರ್ಮಿಕ ಸಮಾರಂಭ , ವಿಶೇಷ ಲಕೋಟೆ ಮತ್ತು ಅಂಚೆಚೀಟಿ ಬಿಡುಗಡೆ, ಫಲಪ್ರದಾಯಿನಿ ಶ್ರೀ ಪಾರ್ವತಿದೇವಿ ವ್ರತ-ಕಥೆ ಪುಸ್ತಕ ಬಿಡುಗಡೆ, ಪುಸ್ತಕ ಮಳಿಗೆ ಉದ್ಘಾಟನೆ ನಡೆಯಲಿದೆ ಎಂದರು.
ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾಮಠದ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಡಿಎಂಎಸ್ ಆಯುರ್ವೇದ ಆಸ್ಪತ್ರೆ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಶತಾಯುಷಿ ಶ್ರೀ ಮರಿದೇವರ ಶಿವಯೋಗ ಚರಿತೆ ಕೃತಿ ಲೋಕಾರ್ಪಣೆ ಮಾಡುವರು. ಧ್ಯಾನಮಂದಿರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.