ಕನ್ನಡಪ್ರಭ ವಾರ್ತೆ ಬೆಳಗಾವಿ
ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆ ಎರಡನೇ ದಿನವಾದ ಬುಧವಾರವೂ ಮುಂದುವರೆಯಿತು.ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ರೈತರ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನಿಗದಿಪಡಿಸಬೇಕು, ರಸಗೊಬ್ಬರ ಸೇರಿದಂತೆ ಕೃಷಿ ಸಾಮಗ್ರಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು. ರೈಲ್ವೆ, ವಿದ್ಯುತ್ ಸೇರಿದಂತೆ ಎಲ್ಲ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದನ್ನು ಕೈಬಿಡಬೇಕು. ಗ್ರಾಪಂ ನೌಕರರಿಗೆ ಕನಿಷ್ಠ ವೇತನ ₹ 31 ಸಾವಿರ ಹಾಗೂ ₹6 ಸಾವಿರ ಪಿಂಚಣಿ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ಮಾಡುವುದು, ತೀವ್ರವಾದ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ನೇಮಕಾತಿ ರದ್ದುಗೊಳಿಸಬೇಕು, ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆ ಅವಕಾಶ ಕಲ್ಪಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸುವುದು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರಸಕ್ತ 2024-25ನೇ ಸಾಲಿನ ಆರ್ಥಿಕ ಆಯವ್ಯಯದಲ್ಲಿ ಸಿಐಟಿಯು ಕಾರ್ಮಿಕರಿಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನ ಘೋಷಿಸುವಂತೆ ಒತ್ತಾಯಿಸಿದರು. ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿ ತರುತ್ತಿದೆ, ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದೆ ಹಾಗಾಗಿ ಕಾರ್ಮಿಕರ ದುಡಿಯುವ ಸೌಲಭ್ಯಗಳನ್ನು ಕಡಿತಗೊಳಿಸಿಲಾಗುತ್ತಿದೆ. ಸಣ್ಣ ಕಾರ್ಮಿಕರ 11 ಜನ ಕೆಲಸ ಮಾಡುತ್ತಿದ್ದರೆ ಬೋನಸ್ ನೀಡುತ್ತಿದ್ದರು. ಕಾಯಿದೆ ತಿದ್ದುಪಡಿ ಆದಮೇಲೆ 33 ಜನಕ್ಕೆ ಏರಿಸಿ, ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಯುಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿ.ಎಂ.ಜೈನೆಖಾನ್, ಎಲ್.ಎಸ್ ನಾಯಕ, ವೀರಭದ್ರ ಕಂಪ್ಲಿ, ಯಲ್ಲಪ್ಪ ನಾಯಕ, ಯಲ್ಲನಗೌಡ ಪಾಟೀಲ, ಮಡ್ಡೆಪ್ಪ ಭಜಂತ್ರಿ, ರಮೇಶ ಹೋಳಿ, ಗಣಪತಿ ಗುರವ, ಮಹಾಂತೇಶ ಪಾಟೀಲ, ಮಂಜುನಾಥ ಕರ್ಕಿ, ಜೀತೇಂದ್ರ ಕಾಗನಕರ, ಬಾಬು ಗೇನಾನಿ, ಬಿ.ಸಿ.ತಳವಾರ ಸೇರಿದಂತೆ ಮೊದಲಾದವರು ಇದ್ದರು.