- ಅಕ್ಕಿ ಸಮರ್ಪಣೆ ಕಾರ್ಯಕ್ರಮದಲ್ಲಿ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಲಿಂ. ಹಿರಿಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.24ರಂದು ಸಾಣೇಹಳ್ಳಿಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಭಕ್ತಿ ಕಾಣಿಕೆಯ ಮಹಾಪೂರವೇ ಹರಿದು ಬರುತ್ತಿದೆ ಎಂದು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಶ್ರೀಗಳು ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಸಹಕಾರ ರತ್ನ ಪುರಸ್ಕೃತ, ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಡಾ.ಜೆ.ಆರ್.ಷಣ್ಮುಖಪ್ಪ ನಿವಾಸದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಕ್ಕಿ ಸಮರ್ಪಣೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ತರಳಬಾಳು ಮಠದ ಲಿಂ.ಹಿರಿಯ ಜಗದ್ಗುರು ಸಮಾಜ ಕಟ್ಟುವ ಕೆಲಸದಲ್ಲಿ ಯಾವುದೇ ಅಡೆತಡೆಗಳು ಬಂದರೂ ಎದೆಕೊಟ್ಟು ಎದುರಿಸಿದರು. ದುಗ್ಗಾಣಿ ಮಠವೆಂದು ಅವಹೇಳನಕ್ಕೆ ಗುರಿಯಾಗಿದ್ದ ಮಠ ಮತ್ತು ಶಿಷ್ಯರನ್ನು ದುಡಿಯುವ ಮಠ, ದುಡಿಯುವ ಶಿಷ್ಯರನ್ನಾಗಿ ಮಾಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಾಲಾ- ಕಾಲೇಜುಗಳನ್ನು ತೆರೆದು ಜಾತ್ಯತೀತವಾಗಿ ಎಲ್ಲ ಮಕ್ಕಳ ಶಿಕ್ಷಣಕ್ಕೆ ನೆರವಾದವರು. ಅದೇ ಪರಂಪರೆ ಇಂದಿಗೂ ಅನುಸರಿಸಿಕೊಂಡು ಸಾಣೇಹಳ್ಳಿ ಶ್ರೀ ಮಠ ಬರುತ್ತಿದೆ ಎಂದು ತಿಳಿಸಿದರು.
ಉದ್ಯಮಿ ಅಣಬೇರು ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂ. ಹಿರಿಯ ಜಗದ್ದುರು ಈ ನಾಡು ಕಂಡ ಶತಮಾನದ ಶ್ರೇಷ್ಠರು. ಹಾಗೆಯೇ ಅವರು ಹಾಕಿಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದೆ. ಅವರು ಸಮಾಜದ ಓಳಿತಿಗಾಗಿ ಮಾಡಿದ ಕೆಲಸಗಳು ಇಂದಿನ ಎಲ್ಲ ಮಠದ ಸ್ವಾಮಿಗಳಿಗೆ ಮಾದರಿಯಾಗಿದೆ. ತಮ್ಮ 60ನೇ ವರ್ಷದಲ್ಲಿ ಪೀಠಕ್ಕೆ ರಾಜೀನಾಮೆ ಸಲ್ಲಿಸಿ ತ್ಯಾಗ ಮಾಡಿದ್ದು ಪ್ರಶಂಸನೀಯ. ಅವರಂತೆ ಎಲ್ಲ ಮಠಾಧೀಶರು ಬದುಕಿ- ಬಾಳಿ ತೋರಿಸಬೇಕಾಗಿದೆ. ಸಾಣೇಹಳ್ಳಿಯಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲು ಮನವಿ ಮಾಡಿದರು.ಸಹಕಾರ ರತ್ನ ಡಾ. ಜೆ.ಆರ್. ಷಣ್ಮುಖಪ್ಪ ಮಾತನಾಡಿ, ಇಂದಿನ ನನ್ನ ಸ್ಥಾನಮಾನಗಳಿಗೆ ಹಿರಿಯ ಲಿಂಗೈಕ್ಯ ಜಗದ್ದುರುಗಳ ಆರ್ಶಿವಾದವೇ ಕಾರಣ. ಅವರು ನಮ್ಮ ಸಮಾಜದ ಶಿಷ್ಯರನ್ನು ದುಡಿಯುವ ಶಿಷ್ಯರನ್ನಾಗಿ ಜೀವನಕ್ಕೆ ಮಾರ್ಗಮಾಡಿದ ಪುಣ್ಯಾತ್ಮರು ಎಂದರು.
ಡಾ. ಬಸವಲಿಂಗ ಪಟ್ಟದದೇವರು, ಪಾಂಡೋಮಟ್ಟಿ ಡಾ.ಗುರುಬಸವ ಮಹಾಸ್ವಾಮೀಜಿ, ಇತರ ಹರಗುರು ಚರಮೂರ್ತಿಗಳು, ಜೆ.ಆರ್. ಷಣ್ಮುಖಪ್ಪನವರ ಕುಟುಂಬ ವರ್ಗದವರು, ಮಳ್ಳೇಕಟ್ಟೆ ಸಂತೋಷ್, ಮಳ್ಳೇಕಟ್ಟೆ ಶ್ರೀನಿವಾಸ್, ಕೆ.ಬಿ.ಬಸವಲಿಂಗಪ್ಪ, ಪಲ್ಲಾಗಟ್ಟೆ ನಾಗರಾಜ ಮುಂತಾದವರು ಉಪಸ್ಥಿತರಿದ್ದರು.- - -
-18ಕೆಡಿವಿಜಿ34:ದಾವಣಗೆರೆಯ ಡಾ.ಜೆ.ಆರ್.ಷಣ್ಮುಖಪ್ಪ ನಿವಾಸದಲ್ಲಿ ನಡೆದ ಅಕ್ಕಿ ಸಮರ್ಪಣಾ ಕಾರ್ಯಕ್ರಮದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಇತರರು ಇದ್ದರು.