ಲಕ್ಕುಂಡಿಯಲ್ಲಿ ಶಿವಲಿಂಗ, ಪೀಠ ಪತ್ತೆ

KannadaprabhaNewsNetwork |  
Published : Jan 19, 2026, 12:45 AM IST
18ಜಿಡಿಜಿ50ಲಕ್ಕುಂಡಿಯಲ್ಲಿ ಭಾನುವಾರ ನಡೆದ ಉತ್ಖನನದಲ್ಲಿ ಪತ್ತೆಯಾದ ಶಿವಲಿಂಗ18ಜಿಡಿಜಿ51ಲಕ್ಕುಂಡಿಯಲ್ಲಿ ಭಾನುವಾರ ಉತ್ಖನನ ಕಾರ್ಯವನ್ನು ಅಧಿಕಾರಿಗಳು ಪರಿಶೀಲಿಸಿದರು. | Kannada Prabha

ಸಾರಾಂಶ

2025ರ ​ಮೇ 15ರಂದು ಅನುಮತಿ ಪಡೆದು ಜೂ. 3ರಂದು ಮುಖ್ಯಮಂತ್ರಿಗಳಿಂದ ಭೂಮಿಪೂಜೆ ನೆರವೇರಿಸಲ್ಪಟ್ಟ ಈ ಯೋಜನೆಯು ಮಳೆಗಾಲದ ವಿರಾಮದ ನಂತರ ಈಗ ಚುರುಕುಗೊಂಡಿದೆ. ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಜಂಟಿ ನೇತೃತ್ವದಲ್ಲಿ ಈ ಸಂಶೋಧನೆ ನಡೆಯುತ್ತಿದೆ.

ಗದಗ: ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಮೂರನೇ ದಿನವಾದ ಭಾನುವಾರವೂ ಉತ್ಖನನ ಮುಂದುವರಿದಿದ್ದು, ವಿಶಿಷ್ಟವಾದ ಶಿವಲಿಂಗ ಮತ್ತು ಅದರ ಪೀಠ ಪತ್ತೆಯಾಗಿದೆ. ಮಣ್ಣಿನ ಪದರದ ಅಡಿಯಲ್ಲಿ ಅಡಗಿದ್ದ ಕಲ್ಯಾಣಿ ಚಾಲುಕ್ಯರ ಕಾಲದ ಅದ್ಭುತ ಕುರುಹುಗಳು ಒಂದೊಂದಾಗಿ ಹೊರಬರುತ್ತಿದ್ದು, ಇತಿಹಾಸಪ್ರೇಮಿಗಳಲ್ಲಿ ಸಂಚಲನ ಮೂಡಿಸುತ್ತಿದೆ.2025ರ ​ಮೇ 15ರಂದು ಅನುಮತಿ ಪಡೆದು ಜೂ. 3ರಂದು ಮುಖ್ಯಮಂತ್ರಿಗಳಿಂದ ಭೂಮಿಪೂಜೆ ನೆರವೇರಿಸಲ್ಪಟ್ಟ ಈ ಯೋಜನೆಯು ಮಳೆಗಾಲದ ವಿರಾಮದ ನಂತರ ಈಗ ಚುರುಕುಗೊಂಡಿದೆ. ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಜಂಟಿ ನೇತೃತ್ವದಲ್ಲಿ ಈ ಸಂಶೋಧನೆ ನಡೆಯುತ್ತಿದೆ.ಅಪರೂಪದ ವಸ್ತುಗಳು: ​ಲಕ್ಕುಂಡಿ ಗ್ರಾಮದ ​ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ ವಿಶೇಷ ಪ್ರಾಚ್ಯಾವಶೇಷಗಳು ಲಭ್ಯವಾಗಿವೆ. ಅದರಲ್ಲಿಯೂ ಭಾನುವಾರ ಕೋಟೆಯ ಗೋಡೆಯ ಒಳಭಾಗದಲ್ಲಿ ವಿಶಿಷ್ಟವಾದ ಶಿವಲಿಂಗ ಮತ್ತು ಅದರ ಪೀಠ ಪತ್ತೆಯಾಗಿದೆ. ಪುರಾತತ್ವ ಇಲಾಖೆಯು ಪೀಠದ ಅಳತೆ ಹಾಗೂ ಫೋಟೋಗ್ರಫಿ ಮೂಲಕ ಇತಿಹಾಸದ ಅಧ್ಯಯನಕ್ಕಾಗಿ ದಾಖಲೆಗಳನ್ನು ಸಂಗ್ರಹಿಸುತ್ತಿದೆ.ಇನ್ನು ಪತ್ತೆಯಾದ ಪುಟ್ಟ ಶಿವಲಿಂಗವು ಕಂಚು ಅಥವಾ ತಾಮ್ರದ್ದಾಗಿರಬಹುದೇ ಎಂಬ ಕುತೂಹಲ ಕೂಡಾ ಜನರಲ್ಲಿ ಕಾಡುತ್ತಿದ್ದು, ಅಧಿಕಾರಿಗಳ ತಪಾಸಣೆಯಿಂದಲೇ ನಿಖರತೆ ಹೊರಬರಬೇಕಿದೆ.

​ನಾಗಮುದ್ರೆ: ನಾಗಮಣಿಯೊಂದಿಗೆ ಇರುವ ಸರ್ಪದ ಹೆಡೆಯ ಆಕೃತಿಯ ಕಲ್ಲು ಸಿಕ್ಕಿರುವುದು ಚಾಲುಕ್ಯರ ಕಾಲದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿ ಒದಗಿಸಿದ್ದು, ಇದರ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನವಾಗಬೇಕಿದೆ.

ಸರ್ಪದ ಆತಂಕ...

​ಉತ್ಖನನ ನಡೆಯುತ್ತಿರುವ ಸ್ಥಳದ ಪಕ್ಕದಲ್ಲೇ ಅದು ಭಾನುವಾರದ ಅಮಾವಾಸ್ಯೆಯಂದು ಎಂಟು ಮೀಟರ್ ಉದ್ದದ ಬೃಹತ್ ಹಾವು ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ದೈವಿಕ ಭಯ ಮತ್ತು ಆತಂಕವನ್ನು ಮೂಡಿಸಿದೆ.

​ನಿಧಿ ಇರುವ ಜಾಗದಲ್ಲಿ ನಾಗರಹಾವು ಇರುತ್ತದೆ ಎಂಬ ಹಳೆಯ ನಂಬಿಕೆ ಗ್ರಾಮದಲ್ಲಿ ಬಲವಾಗಿದ್ದು, ಹಾವಿನ ಕಾಣಿಸಿದ್ದರಿಂದ ಕಾರ್ಮಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಕೆಲಸ ನಿಲ್ಲಿಸುವಂತಾಗಿತ್ತು.

ಗ್ರಾಮದ ​ಜನತಾ ಶಿಕ್ಷಣ ಸಂಸ್ಥೆಯ ಕಟ್ಟಡವೂ ತೆರವುಗೊಳಿಸುವ ಸ್ಥಳದಲ್ಲಿಯೇ ಇದ್ದು, ಭಾನುವಾರ ಆ ಕಟ್ಟಡ ತೆರವು ಮಾಡುವ ವೇಳೆ (ಉತ್ಖನನ ಜಾಗದ ಪಕ್ಕದಲ್ಲಿಯೇ) ಈ ಸರ್ಪ ಕಾಣಿಸಿಕೊಂಡಿದೆ. ಸ್ಥಳೀಯರಲ್ಲಿ ಇದು ಯಾವುದೋ ಕೇಡಿನ ಮುನ್ಸೂಚನೆಯೇ ಎಂಬ ಚರ್ಚೆಗಳು ಶುರುವಾಗಿವೆ.

ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಹಂಪಿ ವಲಯದ ಸ್ಮಿತಾ ರೆಡ್ಡಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಹಾಗೂ ಇತರ ತಜ್ಞರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಉತ್ಖನನದ‌ ವೇಳೆ ದೊರೆಯುತ್ತಿರುವ ವಸ್ತುಗಳ ಬಗ್ಗೆ ಮಾಹಿತಿ‌‌‌ ಸಂಗ್ರಹಿಸುತ್ತಿದ್ದಾರೆ.

ವೈಜ್ಞಾನಿಕ ಅಧ್ಯಯನ: ​ನಮ್ಮ ಗುರಿ ಚಿನ್ನ- ಬೆಳ್ಳಿಯ ಅನ್ವೇಷಣೆಯಲ್ಲ, ಬದಲಾಗಿ ಇತಿಹಾಸದ ಕುರುಹುಗಳನ್ನು ಹುಡುಕುವುದು. ಸಿಕ್ಕಿರುವ ಅವಶೇಷಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ, ಭೂಮಿಯಲ್ಲಿ ಮುಚ್ವಿ ಹೋಗಿರುವ ಅಪರೂಪದ ಶಿಲಾ ಸಂಸ್ಕೃತಿ ಮುಂದಿನ ತಲೆಮಾರಿಗೆ ಪರಿಚಯಿಸುವುದಾಗಿದೆ. ಭಾನುವಾರ ದೊರೆತಿರುವ ವಸ್ತುಗಳು ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿದವು ಎಂಬುದು ಸ್ಪಷ್ಟವಾಗಿದೆ ಎಂದು ಮೈಸೂರು ವಲಯದ ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜು ತಿಳಿಸಿದರು.

ಮಹತ್ವದ ಪ್ರಯತ್ನ: ಲಕ್ಕುಂಡಿಯ ಈ ಉತ್ಖನನವು ಕೇವಲ ಮಣ್ಣು ಅಗೆಯುವ ಕೆಲಸವಲ್ಲ, ಇದು ಕನ್ನಡಿಗರ ಕಳೆದುಹೋದ ವೈಭವದ ಇತಿಹಾಸವನ್ನು ಮರುಸ್ಥಾಪಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಲಕ್ಕುಂಡಿ‌ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಡ್ಡಾಯ ಪ್ರವೇಶಕ್ಕೆ ಆಗ್ರಹ
ಹೇಳಿಕೆ ಮಾತು ಬಿಟ್ಟು ಜನಪರ ಅಭಿವೃದ್ಧಿ ಕೆಲಸ ಮಾಡಲಿ: ಸಂಸದ ಬಿ.ವೈ ರಾಘವೇಂದ್ರ