ಜಿಲ್ಲಾದ್ಯಂತ ಶಿವರಾತ್ರಿ ಸಂಭ್ರಮ: ಜಾಗರಣೆ, ಸಾಂಸ್ಕೃತಿಕ ಕಾರ್ಯಕ್ರಮ

KannadaprabhaNewsNetwork |  
Published : Feb 27, 2025, 12:34 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಜಿಲ್ಲಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬ ಅಂಗವಾಗಿ ಮನೆಗಳು, ದೇಗುಲಗಳಲ್ಲಿ ವಿಶೇಷ ಪೂಜೆ, ಜಪತಪ, ಜಾಗರಣೆಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

- ಎಲ್ಲೆಡೆ "ಓಂ ನಮಃ ಶಿವಾಯ " ಸದ್ದು, ಜಪತಪ, ವಿಶೇಷ ಪೂಜೆ । ಕೆಲ ದೇಗುಲಗಳ ಬಳಿ ಭಕ್ತರಿಗೆ ನೆರಳು, ನೀರು ವ್ಯವಸ್ಥೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬ ಅಂಗವಾಗಿ ಮನೆಗಳು, ದೇಗುಲಗಳಲ್ಲಿ ವಿಶೇಷ ಪೂಜೆ, ಜಪತಪ, ಜಾಗರಣೆಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಶಿವಾಲಯ, ಈಶ್ವರನ ದೇವಾಲಯಗಳಲ್ಲಿ ಅಭಿಷೇಕ, ವಿಶೇಷ ಪೂಜೆ, ವಿವಿಧ ಬಗೆಯ ಹೂ, ಬಿಲ್ವಪತ್ರೆಯಿಂದ ಅರ್ಚನೆ, ಹಾಲು, ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಮುಂಜಾನೆಯಿಂದಲೇ ಭಕ್ತರು ದೇಗುಗಳ ಕಡೆ ತೆರಳಿ, ಪೂಜೆ ಸಲ್ಲಿಸಿದರು. ಕುಟುಂಬದ ಸದಸ್ಯರುಗಳೊಂದಿಗೆ ಇಷ್ಟಾರ್ಥಗಳು ನೆರವೇರಲಿ ಎಂದು ಹರಕೆ ಹೊತ್ತು ಸರತಿಯಲ್ಲಿ ನಿಂತು ಶಿವ, ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ತುಂಬೆ ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳೊಂದಿಗೆ ಅಭಿಷೇಕ, ಪೂಜಾ ಕಾರ್ಯಗಳನ್ನು ಸಲ್ಲಿಸಿ, ಭಕ್ತಿ ಸಮರ್ಪಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ 108 ಶಿವಲಿಂಗಗಳೊಂದಿಗೆ ಸದ್ಭಾವನಾ ಶಾಂತಿ ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ದೇವಾಲಯಗಳಲ್ಲಿ ಸರ್ವಂ ಶಿವಮಯಂ, ಶಿವಮಯಂ ಸರ್ವಂ ಎಂಬಂತೆ ಎಲ್ಲೆಡೆ ಶಿವನಾದ ಕೇಳಿ ಬರುತ್ತಿತ್ತು.

ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಗೀತಾಂಜಲಿ ಚಿತ್ರಮಂದಿರ ಪಕ್ಕದಲ್ಲಿರುವ ಲಿಂಗೇಶ್ವರ ಸ್ವಾಮಿ ದೇವಸ್ಥಾನ, ಸ್ವಾಗೇರ ಪೇಟೆಯ ಪಾತಾಳ ಲಿಂಗೇಶ್ವರ ಸ್ವಾಮಿ ದೇವಸ್ಥಾನ, ವಿದ್ಯಾನಗರ ಮುಖ್ಯ ರಸ್ತೆಯ ಈಶ್ವರ ಪಾರ್ವತಿ ಗಣೇಶ ದೇವಸ್ಥಾನ, ಎಸ್‌ಕೆಪಿ ರಸ್ತೆಯ ಮಾರ್ಕಂಡೇಶ್ವರ ದೇವಸ್ಥಾನ, ಬಿಐಇಟಿ ಕಾಲೇಜು ರಸ್ತೆಯ ಶಿವಾಲಯ, ವಿನೋಬನಗರದ ಮಾಚಿದೇವ ದೇವಸ್ಥಾನ, ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನ, ಅಥಣಿ ಕಾಲೇಜಿನಲ್ಲಿರುವ ದೊಡ್ಡ ಶಿವನ ಮೂರ್ತಿ, ಕೆಟಿಜೆ ನಗರದ ನೀಲಕಂಠೇಶ್ವರ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರ ದಂಡು ಇತ್ತು.

ದೇಗುಲಗಳಲ್ಲಿ ಭಕ್ತಾದಿಗಳಿಗೆ ತೊಂದರೆ ಆಗದಂತೆ ಕೆಲವೆಡೆ ಶಾಮಿಯಾನ ಹಾಕಿ, ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ಕುಳಿತುಕೊಳ್ಳಲು ಕುರ್ಚಿಗಳನ್ನು ಸಹ ಹಾಕಲಾಗಿತ್ತು. ರಾತ್ರಿವೇಳೆಗೆ ಮನೆಯಲ್ಲಿ ಶಿವನ ಪೂಜೆ ಮಾಡಿ ಕುಟುಂಬದ ಸದಸ್ಯರು ಲಘು ಉಪಾಹಾರ ಸೇವನೆ ಮಾಡಿದರು. ಕೆಲವರು ಜಾಗರಣೆ, ಭಜನೆಯಲ್ಲಿ ತೊಡಗಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:

ಮಹಾಶಿವರಾತ್ರಿ ಅಂಗವಾಗಿ ನಗರದ ವಿವಿಧ ಶಿವಾಲಯಗಳಲ್ಲಿ ರಾತ್ರಿ ಸಂಗೀತ, ನೃತ್ಯ, ಸಾಂಸ್ಕೃತಿಕ, ಹಾಸ್ಯ ಕಾರ್ಯಕ್ರಮಗಳು ನಡೆದವು. ನಮನ ಅಕಾಡೆಮಿಯ ವಿದುಷಿ ನೃತ್ಯಗುರು ಡಿ.ಕೆ.ಮಾಧವಿ ಮತ್ತು ತಂಡದವರು ಇಲ್ಲಿನ ನಾಲ್ಕು ದೇವಾಲಯಗಳಲ್ಲಿ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮ, ಚಿರಂತನ ತಂಡದ ದೀಪಾ ಎನ್.ರಾವ್ ನೇತೃತ್ವದಲ್ಲಿ ಇಲ್ಲಿನ ಅಥಣಿ ಕಾಲೇಜಿನ ಆವರಣದಲ್ಲಿ ಶಿವ ಭಕ್ತಿ ಬಿಂಬಿಸುವ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು. ಬಿಐಇಟಿ ಕಾಲೇಜಿನ ಸಮೀಪ ಇರುವ ಶಿವಧ್ಯಾನ ಮಂದಿರದಲ್ಲಿ ಗಾಯಕಿ ಅರ್ಚನ ಉಡುಪ ಮತ್ತು ತಂಡದವರು ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

- - - -(ಫೋಟೋಗಳು ಇವೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ