ಶಿವಾಲಯಗಳಿಗೆ ಭಕ್ತರ ದಂಡು । ಬೆಳಗಿನಿಂದ ಉಪವಾಸ । ಶಿವನಾಮ ಸ್ಮರಣೆ । ನಟ ದೊಡ್ಡಣ್ಣ ಪೂಜೆ । ಕಂಗೊಳಿಸಿದ ಶಿವಾಲಯಗಳು
ಕನ್ನಡಪ್ರಭ ವಾರ್ತೆ ಅರಸೀಕೆರೆಮಹಾಶಿವರಾತ್ರಿಯ ಅಂಗವಾಗಿ ನಗರದ ವಿವಿಧ ಶಿವ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ಶಿವಭಕ್ತರು ಬೆಳಗಿನಿಂದಲೇ ಉಪವಾಸವ್ರತ ಆಚರಿಸಿ ಶಿವಪೂಜೆ ಮಾಡಿದ ನಂತರ ರಾತ್ರಿ ಶಿವದೇವಾಲಯಗಳಿಗೆ ತೆರಳಿ ಶಾಸ್ತ್ರೋಕ್ತವಾಗಿ ಶ್ರದ್ಧಾಭಕ್ತಿಯಿಂದ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ ರಾತ್ರಿಯಿಡಿ ಶಿವನಾಮಸ್ಮರಣೆ, ಶಿವಭಜನೆ, ಶಿವಕೀರ್ತನೆಯಲ್ಲಿ ತಲ್ಲೀನರಾದರು.
ಹೊಯ್ಸಳರ ಕಾಲದ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು.ಶ್ರೀ ಸ್ವಾಮಿಯವರಿಗೆ ಬೆಳಗಿನಿಂದಲೇ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿವಿಧ ಪೂಜೆಗಳು ನೆರವೇರಿದವು. ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಗಳ ಅಲಂಕಾರ ನೋಡುಗರನ್ನು ಆಕರ್ಷಿಸುತ್ತಿದ್ದು ಬೆಳಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ಸಾಲಿನಲ್ಲಿ ನಿಂತು ಅತ್ಯಾಕರ್ಷಕವಾಗಿ ಶೃಂಗರಿಸಲಾಗಿದ್ದ ಈಶ್ವರಲಿಂಗದ ದರ್ಶನ ಪಡೆದು ಭಕ್ತಿ ಸಮರ್ಪಿಸಿ ಕೃತಾರ್ಥರಾದರು.ಚಲನಚಿತ್ರ ನಟ ದೊಡ್ಡಣ್ಣ ನಗರಕ್ಕೆ ಆಗಮಿಸಿ ಶಿವಾಲಯದಲ್ಲಿ ಶಿವಲಿಂಗಪೂಜೆಯಲ್ಲಿ ಪಾಲ್ಗೊಂಡರು. ಕಳೆದ ೧ ವಾರದಿಂದ ಶಿವಾಲಯ ಭಕ್ತ ಮಂಡಲಿಯ ಕೆ.ವಿ.ಎನ್ ಶಿವು ಜವಳಿ ಮಂಜುನಾಥ್, ರಾಜ್‌ಗೋಪಾಲ್, ಸಂತೋಷ್, ಶಶಿಧರ್, ಸುರಭಿ ರವಿ, ವಿರೂಪಾಕ್ಷ, ಪ್ರಭು, ಕುಮಾರ್, ಚಂದ್ರು ಹಾಗೂ ಇನ್ನಿತರರು ದೇವಾಲಯದ ಸ್ವಚ್ಛತೆ ಹಾಗೂ ಅಲಂಕಾರ ಕಾರ್ಯ ಕೈಗೊಂಡ ಪರಿಣಾಮ ಅಭಿವೃದ್ಧಿ ಇಲ್ಲದೆ ಸೊರಗಿದ್ದ ಶಿವಾಲಯ ಕೈಲಾಸವೇ ಧರೆಗಿಳಿದಂತೆ ಕಂಡು ಬಂದಿದ್ದು ಭಕ್ತರ ಪ್ರಶಂಸೆಗೆ ಪಾತ್ರವಾಗಿತ್ತು.
ಮೂರು ಕಳಸದ ಮಠದ ಸಿದ್ಧರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ೧೦೦೮ ಲೀಟರ್ ಹಾಲಿನ ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗಿನಿಂದಲೇ ಭಜನಾ ಕಾರ್ಯಕ್ರಮ ಸಂಜೆವರೆಗೂ ನಡೆಯಿತು. ಗ್ರಂಥಾಲಯ ರಸ್ತೆಯಲ್ಲಿರುವ ಭವಾನಿಶಂಕರ ದೇವಾಲಯ, ಸುಭಾಷ್ ನಗರದಲ್ಲಿರುವ ಕೆಂಗಲ್ ಸಿದ್ದೇಶ್ವರ ಸ್ವಾಮಿ ದೇವಾಲಯ, ಮಿನಿ ವಿಧಾನಸೌಧದ ಬಳಿಯಿರುವ ಕೆಂಗಲ್ ಬಸವೇಶ್ವರ ಸ್ವಾಮಿ ದೇವಾಲಯ, ರುದ್ರಗುಡಿ ಬೀದಿಯಲ್ಲಿರುವ ವೀರಭದ್ರಸ್ವಾಮಿ ದೇವಾಲಯ, ಭಕ್ತರು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ದರ್ಶನ ಪಡೆದರು.ಮಲ್ಲೇಶ್ವರ ನಗರದ ಬೆಟ್ಟದ ಮೇಲಿರುವ ಮಳೆಮಲ್ಲೇಶ್ವರ ಸ್ವಾಮಿ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ, ಪಂಚಾಮೃತಭಿಷೇಕ, ಕ್ಷೀರಾಭಿಷೇಕ ಸೇರಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗಿನಿಂದಲೇ ಭಕ್ತರು ಸಾಲು ಸಾಲಾಗಿ ಬೆಟ್ಟ ಹತ್ತಿ ದೇವರಿಗೆ ಪೂಜೆ ಸಲ್ಲಸಿದರು. ರಾತ್ರಿಯಿಡೀ ಭಕ್ತರಿಂದ ಭಜನೆ ನೆರವೇರಿತು. ಶನಿವಾರ ಬೆಳಿಗ್ಗೆ ೧೧.೩೦ಕ್ಕೆ ಮಳೆಮಲ್ಲೇಶ್ವರ ಸ್ವಾಮಿ, ವಿಜೃಂಭಣೆಯ ಉತ್ಸವ ಹಾಗೂ ೧೦೧ ಎಡೆ ಸೇವೆ ನಡೆಯಿತು.
ಶಿವರಾತ್ರಿಯ ಅಂಗವಾಗಿ ಬೆಳಗಿನಿಂದ ನಿಯಮ ನಿಷ್ಠೆಯಿಂದ ಉಪವಾಸ ವ್ರತ ಆಚರಿಸಿ ಸಂಜೆ ಶಾಸ್ತ್ರೋಸ್ತ್ರವಾಗಿ ಶಿವ ಪ್ರಜೆ ಸಲ್ಲಿಸಿ ಶಿವನಾಮಸ್ಮರಣೆಯಲ್ಲಿ ಮಹಾಶಿವರಾತ್ರಿ ಆಚರಿಸಿದರೆ ಇನ್ನು ಕೆಲವರು ಆಟ, ಕ್ರೀಡೆಗಳು, ಟಿ.ವಿ.ವೀಕ್ಷಣೆಯ ಮೂಲಕ ಶಿವರಾತ್ರಿ ಆಚರಿಸಿದ್ದು ವಿಶೇಷವಾಗಿತ್ತು.ಅರಸೀಕೆರೆಯಲ್ಲಿ ವಿದ್ಯುದೀಪಗಳಿಂದ ಅಲಂಕೃತವಾಗಿರುವ ಶಿವನ (ಚಂದ್ರಮೌಳೇಶ್ವರ) ದೇವಾಲಯ.