ಕಾರಟಗಿ:
ಶಿವರಾತ್ರಿ ನಿಮಿತ್ತ ವಿವಿಧ ಶಿವನ ದೇವಸ್ಥಾನಗಳಲ್ಲಿ ಬೆಳ್ಳಗೆಯಿಂದದಲೇ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ನಡೆದವು. ಇಲ್ಲಿನ ಪುರಾತನ ಮಹಾದೇಶ್ವರ ದೇವಾಲಯದಲ್ಲಿ 12 ಅಡಿ ಪಾಣಿಪೀಠದ ಬೃಹತ್ ಶಿವಲಿಂಗುವಿಗೆ ಆಕರ್ಷಕ ಅಲಂಕಾರ ಮಾಡಿ ಶೃಂಗರಿಸಲಾಗಿತ್ತು, ದರ್ಶನ ಪಡೆಯಲು ಭಕ್ತರು ಸರದಿಯಲ್ಲಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಉಪಾಹಾರ ವಿತರಿಸಲಾಯಿತು.
ಈಶ್ವರ ದೇವಾಲಯ:ಹಳೇ ನಾಡಕಚೇರಿ ರಸ್ತೆಯಲ್ಲಿನ ಈಶ್ವರ ದೇವಸ್ಥಾನದಲ್ಲಿ ಜನರನ್ನು ಹೆಚ್ಚು ಆಕರ್ಷಿಸುವ ಸಹಸ್ರ ಶಿವಲಿಂಗುವಿನ ದರ್ಶನಕ್ಕೆ ಭಕ್ತರ ಸಂದಣಿ ಅಧಿಕವಾಗಿತ್ತು. ಆಕರ್ಷಕ ಅಲಂಕಾರ ಸಹಿತ ದೇವಾಲಯವನ್ನು ಶೃಂಗರಿಸಲಾಗಿತ್ತು. ಆಗಮಿಸಿದ ಭಕ್ತರಿಗೆ ತೀರ್ಥ, ಪ್ರಸಾದ, ಉಪಾಹಾರ ವಿತರಿಸಲಾಯಿತು.
ಶರಣಬಸವೇಶ್ವರ ಕಲ್ಯಾಣ ಮಂಟಪದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ, ನವಲಿ ರಸ್ತೆಯಲ್ಲಿಯ ಕರೆಪ್ಪ ತಾತ, ಕೆರೆ ಬಸವೇಶ್ವರ ದೇವಾಲಯ ಸಹಿತ ಇತರ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ವಿವಿಧ ದೇವಾಲಯಗಳಲ್ಲಿ ಕುಟುಂಬ ಪರಿವಾರ ಸಮೇತ ಆಗಮಿಸಿದ ಭಕ್ತರು ಪೂಜೆ ಸಲ್ಲಿಸಿ, ತರಹೇವಾರಿ ಉಪಾಹಾರದ ತಿನಿಸು ಸಮರ್ಪಿಸಿ, ಕಾಯಿ, ಕರ್ಪೂರ, ನೈವೇದ್ಯ ಮಾಡಿಸಿ ಭಕ್ತಿ ಸಮರ್ಪಿಸಿದರು. ದೇವಾಲಯಗಳಲ್ಲಿ ನಾಗರಿಕರು, ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ದೇವಾಲಯಗಳಲ್ಲಿ ಬುಧವಾರ ರಾತ್ರಿ ಭಜನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಅನೇಕರು ಉಪವಾಸ ವ್ರತಾಚರಣೆ ಕೈಗೊಂಡು ರಾತ್ರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಉಪವಾಸ ಅಂತ್ಯಗೊಳಿಸಿದರು.