ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕುಳುವ ಮಹಾಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೋಷಿತ ಮತ್ತು ದಮನಿತ ವರ್ಗಗಳ ಧ್ವನಿಯಾಗಿ ಗುರುತಿಸಿಕೊಂಡ ಶಿವ ಶರಣರ ಆದರ್ಶಗಳನ್ನು ಸಾಕಾರಗೊಳಿಸಲು ಎಲ್ಲರೂ ವಿದ್ಯಾವಂತರಾಗಬೇಕು. ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವ ಕೆಲಸ ಮಾಡಬೇಕು ಎಂದು ತಿಳಿಸಿದ ಅವರು, ನಿರಂತರ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಓದಿ ಉನ್ನತ ಅಧಿಕಾರಿಗಳಾಗುವ ಮೂಲಕ ಸಮುದಾಯಕ್ಕೆ ದೊಡ್ಡ ಆಸ್ತಿಗಳಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ, ತಮ್ಮ ಕಾಯಕ ನಿಷ್ಠೆಗೆ ಗುರುತಾಗಿದ್ದ ನುಲಿಯ ಚಂದಯ್ಯನವರ ತತ್ವಾದರ್ಶಗಳು ತಳ ಸಮುದಾಯಗಳಿಗೆ ಮಾರ್ಗದರ್ಶಕವಾಗಿದ್ದು, ತಳ ಸಮುದಾಯಗಳು ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವದಿಂದ ಜನರು ಒಟ್ಟಾದಾಗ ಮಾತ್ರ ತಳ ಸಮುದಾಯಗಳು ಸಮಾಜದ ಮುನ್ನೆಲೆಗೆ ಬರುತ್ತವೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕೊತ್ತಗೆರೆ ಮಾತನಾಡಿ, ಕುಶಲಕರ್ಮಿ ಮತ್ತು ಕಾಯಕ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬಸವಣ್ಣನವರ ಸಮಕಾಲೀನ ನುಲಿಯ ಚಂದಯ್ಯ ಅವರು ಬಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ಜನಿಸಿದರು. ನುಲಿಯ ಚಂದಯ್ಯ ಅವರ ವಿಚಾರಧಾರೆಗಳನ್ನು ತಿಳಿದುಕೊಂಡು ಕಾಯಕ ಸಮುದಾಯಗಳು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಭಾರತೀಯ ಆಹಾರ ಅಭಿವೃದ್ಧಿ ನಿಗಮದ ಸದಸ್ಯ ಸೊಗಡು ವೆಂಕಟೇಶ್, ಜಿಲ್ಲಾ ಕುಳುವ ಮಹಾಸಂಘದ ಅಧ್ಯಕ್ಷ ಲೋಕೇಶ್ ಸ್ವಾಮಿ, ಬಿ.ಆರ್. ಅಖಿಲ, ಕರ್ನಾಟಕ ಕುಳುವ ಮಹಾಸಂಘದ ಅಧ್ಯಕ್ಷ ಶಿವಾನಂದ ಭಜಂತ್ರಿ, ಶಿವರಾಮ್ ಹೆಬ್ಬೂರು, ಶ್ರೀನಿವಾಸ್ ಮೂರ್ತಿ ಸೇರಿದಂತೆ ಕುಳುವ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.