ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಅವರಿಗೆ ಅಮೆರಿಕದ ಚಿಕಾಗೋ ಮೂಲದ ಅಮೆರಿಕನ್‌ ಮಲ್ಟಿ ಎಥ್ನಿಕ್‌ ಕಮಿಷನ್‌ (ಎಎಂಇಸಿ) ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಗ್ಲೋಬಲ್‌ ಸಿವಿಕ್‌ ಲೀಡರ್‌ಶಿಪ್’ ಪ್ರಶಸ್ತಿ ಪ್ರದಾನವಾಗಲಿದೆ. ಈ ಹಿನ್ನೆಲೆಯಲ್ಲಿ ಸಚಿವ ಖಾದರ್ ಅವರು ಜು. 23ರಿಂದ 29ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ಮಂಗಳೂರು: ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಅವರಿಗೆ ಅಮೆರಿಕದ ಚಿಕಾಗೋ ಮೂಲದ ಅಮೆರಿಕನ್‌ ಮಲ್ಟಿ ಎಥ್ನಿಕ್‌ ಕಮಿಷನ್‌ (ಎಎಂಇಸಿ) ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಗ್ಲೋಬಲ್‌ ಸಿವಿಕ್‌ ಲೀಡರ್‌ಶಿಪ್’ ಪ್ರಶಸ್ತಿ ಪ್ರದಾನವಾಗಲಿದೆ. ಈ ಹಿನ್ನೆಲೆಯಲ್ಲಿ ಸಚಿವ ಖಾದರ್ ಅವರು ಜು. 23ರಿಂದ 29ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ಜುಲೈ 25ರಂದು ಅಮೆರಿಕದ ಇಲಿನಾಯ್ಸ್ ರಾಜ್ಯದ ನೇಪರ್‌ವಿಲ್ಲೆಯ ಆಡಿಟೋರಿಯಂನಲ್ಲಿ ನಡೆಯುವ 15ನೇ ವಾರ್ಷಿಕ AMEC Congressional Global Champions Gala-2026 ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸಚಿವ ಖಾದರ್ ಅವರಿಗೆ ಪ್ರದಾನ ಮಾಡಲಾಗುತ್ತದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುಧಾರಣೆ, ಜನಪರ ಆಡಳಿತ, ಸಮುದಾಯ ಕೇಂದ್ರಿತ ಅಭಿವೃದ್ಧಿ ಹಾಗೂ ಹಲವು ದಶಕಗಳ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಎಎಂಇಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಶಸ್ತಿ ಸ್ವೀಕಾರದ ಜೊತೆಗೆ ಸಚಿವ ಖಾದರ್ ಅಮೆರಿಕದಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಜು.24 ರಂದು ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಡೆಯುವ ‘Building the India-America Millet Partnership for a Healthier, Sustainable and Food Secure Future’ ವಿಷಯದ ದುಂಡುಮೇಜು ಸಭೆಯಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.

ಇದೇ ದಿನ Malcolm X Collegeಗೆ ಭೇಟಿ ನೀಡಿ ರೋಬೋಟಿಕ್ ಔಟ್‌ಪೇಷೆಂಟ್ ಕ್ಲಿನಿಕ್ ಸೇರಿದಂತೆ ಆರೋಗ್ಯ ತಂತ್ರಜ್ಞಾನ ಸೌಲಭ್ಯಗಳನ್ನು ವೀಕ್ಷಿಸಲಿದ್ದಾರೆ. ಅಲ್ಲದೆ University of Illinois Chicago (UIC), Rush University System for Health ಹಾಗೂ Illinois Institute of Technology (IIT Chicago) ಪ್ರತಿನಿಧಿಗಳೊಂದಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಡಿಜಿಟಲ್ ವೈದ್ಯಕೀಯ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಚರ್ಚೆ ನಡೆಸಲಿದ್ದಾರೆ.

ಜು.27 ರಂದು ಇಂಡಿಯಾನಾದ Purdue Universityಯಲ್ಲಿ ನಡೆಯುವ Global Strategic Alliance Dialogue on Food Science ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಜೀವನಶೈಲಿ ಕಾಯಿಲೆಗಳ ತಡೆ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ.

ಜು. 28 ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ವಿವಿಧ ರಾಷ್ಟ್ರೀಯ ಸಂಸ್ಥೆಗಳು ಮತ್ತು ನಾಯಕರನ್ನು ಭೇಟಿ ಮಾಡಿದ ಬಳಿಕ ಜು.30ರಂದು ಬೆಂಗಳೂರಿಗೆ ಮರಳಲಿದ್ದಾರೆ.

ಜಾಗತಿಕ ನಾಯಕರಿಗೂ ಗೌರವ

ಈ ವರ್ಷದ ಎಎಂಇಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸ್ಯಾಮ್ ಪಿತ್ರೋಡಾ, Pin Ni, Judy Hsu, ಡಾ. ಓಮರ್ ಬಿ. ಲತೀಫ್, ಡಾ. ಸೆನಾಯ್ ಸಿಮ್ಸೆಕ್, ಬಾಬ್ ಗ್ರೋಗನ್, ಲಾ ಶಾನ್ ಕೆ. ಫೋರ್ಡ್ ಸೇರಿದಂತೆ ಸರ್ಕಾರ, ಉದ್ಯಮ, ವೈದ್ಯಕೀಯ, ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರದ ಹಲವು ಗಣ್ಯರು ಸೇರಿದ್ದಾರೆ.

ಎಎಂಇಸಿ 2009ರಲ್ಲಿ ಸ್ಥಾಪನೆಯಾದ ಅಮೆರಿಕದ ಲಾಭರಹಿತ ಸಂಸ್ಥೆಯಾಗಿದ್ದು, ಬಹುಸಾಂಸ್ಕೃತಿಕ ನಾಯಕತ್ವ, ನಾಗರಿಕ ಪಾಲ್ಗೊಳ್ಳುವಿಕೆ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ ಕಾರ್ಯಕ್ರಮದ ಮೂಲಕ ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ನಾಯಕರನ್ನು ಗೌರವಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.