ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೂವರಿಗೆ ಇಂದಿರಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ರಿಟಿಷ್ ಅಧಿಕಾರಿಗಳು, ಧರ್ಮ ಪ್ರಚಾರಕ್ಕೆ ಬಂದವರು, ಕನ್ನಡದ ಮಾಧುರ್ಯಕ್ಕೆ ಮನಸೋತು, ಕನ್ನಡ ಕಟ್ಟುವ ಕಾಯಕದಲ್ಲಿ ತೊಡಗಿದರು. ಕೆಲವೆಡೆ ಕನ್ನಡಡಿಗರೇ ಕನ್ನಡ ವಿರೋಧಿಗಳಾಗಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ರಾಜಪ್ಪ ದಳವಾಯಿ ಬೇಸರ ವ್ಯಕ್ತಪಡಿಸಿದರು.

ಸೋಮವಾರ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಇಂದಿರಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತ ಕನ್ನಡ ವಿರೋಧಿಗಳೇ ಹೆಚ್ಚಾಗಿದ್ದಾರೆ. ಕನ್ನಡ ಮಾತನಾಡದಂತೆ ದಂಡ ವಿಧಿಸುವ ಶಾಲೆಗಳು, ಕನ್ನಡ ಬಳಕೆಯನ್ನೇ ನಿಷೇಧಿಸುವ ಸಂಸ್ಥೆಗಳು ಇಲ್ಲಿವೆ. ಬರೀ ಬಾಯಿಮಾತಿನಿಂದ ಏನೂ ಸಾಧ್ಯವಿಲ್ಲ. ಕನ್ನಡದ ಅಸ್ಮಿತೆಯನ್ನು ಉಳಿಸಲು ಅನೇಕ ಮಹಾನುಭಾವರು ಕೆಲಸ ಮಾಡಿದ್ದು ಅದನ್ನು ಬೆಳೆಸುವ ಕೆಲಸ ನಾವು ಮಾಡಬೇಕಾಗಿದೆ ಎಂದರು.

ಕಿಟೆಲ್ ಅವರು ಕನ್ನಡ ಕಲಿತು, ಹಳಗನ್ನಡ ಸಾಹಿತ್ಯ ಅಧ್ಯಯನ ಮಾಡಿದರು. ಪ್ರತಿ ಪದವನ್ನೂ ಸಹ ಅರ್ಥೈಸಿಕೊಳ್ಳಲು ಕಠಿಣ ಪರಿಶ್ರಮ ಪಟ್ಟ ಅವರು ಎಲ್ಲರಿಗೂ ಅನುಕೂಲವಾಗುವಂತೆ ನಿಘಂಟು ರಚಿಸಿದರು. ರೈಸ್, ಮೊಗ್ಲಿಂಗ್ ಅವರ ಸೇವೆ ಮರೆಯಲಾಗದು. ಬಳ್ಳಾರಿಯನ್ನು ನಮ್ಮ ರಾಜ್ಯಕ್ಕೆ ಸೇರಿಸಲು ಪೈಲ್ವಾನ್ ರಂಜಾನ್ ಸಾಬ್ ಏಕೀಕರಣ ಹೋರಾಟದಲ್ಲಿ ಭಾಗವಹಿಸಿ ಪ್ರಾಣವನ್ನೇ ತೆತ್ತರು ಎಂದು ಸ್ಮರಿಸಿದರು.

ಹಿರಿಯ ವಿಮರ್ಶಕಿ ಎಂ.ಎಸ್‌.ಆಶಾದೇವಿ, ನಿಜ ಶಿವಶರಣೆಯರಾದ ಲಲಿತಮ್ಮ ಡಾ. ಚಂದ್ರಶೇಖರ್‌, ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಇಂದಿರಾ ರತ್ನ ಪ್ರಶಸ್ತಿ ನೀಡುತ್ತಿರುವುದು ಆ ಪ್ರಶಸ್ತಿಗೆ ಮೌಲ್ಯ ತಂದುಕೊಟ್ಟಂತೆ ಎಂದು ಶ್ಲಾಘಿಸಿದರು. ಗಾಂಧೀ ಸ್ಮಾರಕ ಭವನದ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರು, ಮಕ್ಕಳಲ್ಲಿ ಕನ್ನಡದ ಪ್ರೀತಿಯನ್ನು ಬೆಳಸಿಕೊಳ್ಳುವಂತೆ ಸಲಹೆ ನೀಡಿದರು. ಈ ವೇಳೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಸುನಂದಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಮಾ ಸತೀಶ ಸ್ವಾಗತಿಸಿದರು.