ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.13ರಂದು ಆಯೋಜಿಸಲಿರುವ ಬಹು ನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಈ ಬಾರಿ 3 ಹೊಸ ತಳಿಗಳನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.13ರಂದು ಆಯೋಜಿಸಲಿರುವ ಬಹು ನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಈ ಬಾರಿ 3 ಹೊಸ ತಳಿಗಳನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ. ಕಡಿಮೆ ನೀರಿನಲ್ಲೂ ಹುಲುಸಾಗಿ ಬೆಳೆ ಬರುವ ರಾಗಿಯ ಜಿಪಿಯು 101, ಮುಸುಕಿನ ಜೋಳದ ಎಂಎಎಚ್ 20-45 ಹಾಗೂ ಬೀಜದ ದಂಟಿನ ಕೆಬಿಜೆಎ 18 ತಳಿಗಳನ್ನು ನೂತನವಾಗಿ ಸಂಶೋಧಿಸಲಾಗಿದ್ದು ಕೃಷಿ ಮೇಳದಲ್ಲಿ ಬಿಡುಗಡೆಗೊಳಿಸಲಾಗುವುದು. ನೂತನ ತಳಿಗಳನ್ನು ಅಂದು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
ಜಿಪಿಯು 101 ನೂತನ ರಾಗಿ ತಳಿಯು 110 ರಿಂದ 115 ದಿನದಲ್ಲಿ ಕಟಾವಿಗೆ ಸಿದ್ಧವಾಗಲಿದೆ. ಹೆಕ್ಟೇರ್ಗೆ 37 ರಿಂದ 40 ಕ್ವಿಂಟಲ್ ಇಳುವರಿ ಬರಲಿದ್ದು 6.5 ಟನ್ ಮೇವು ಸಿಗುವುದು ಈ ತಳಿಯ ವಿಶೇಷವಾಗಿದೆ. ಕಡಿಮೆ ನೀರಿನಲ್ಲೂ ಹುಲುಸಾಗಿ ಬೆಳೆ ಬರುವುದರಿಂದ ಬರಗಾಲಕ್ಕೆ ಈ ತಳಿ ಸೂಕ್ತವಾಗಿದೆ. ಬೆಂಕಿರೋಗ ನಿರೋಧಕತೆ ಹೊಂದಿದ್ದು ಬಾಗುವಿಕೆಗೆ ಪ್ರತಿರೋಧ ಸಾಮರ್ಥ್ಯವನ್ನು ಹೊಂದಿದೆ. ಈ ರಾಗಿಯಲ್ಲಿ ಕಬ್ಬಿಣದ ಅಂಶ ಅಧಿಕವಾಗಿದೆ ಎಂದು ವಿವಿ ಮೂಲಗಳು ಸ್ಪಷ್ಟಪಡಿಸಿವೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಳಿ ಅಭಿವೃದ್ಧಿ ವಿಜ್ಞಾನಿ ಡಾ.ಮಾರಪ್ಪ, ‘ರಾಗಿಯ ಜಿಪಿಯು 101 ತಳಿಯು ಮಧ್ಯಮಾವಧಿ ತಳಿಯಾಗಿದ್ದು ಕಡಿಮೆ ನೀರಿನಲ್ಲೂ ಉತ್ತಮವಾಗಿ ಬೆಳೆಯುತ್ತದೆ. ಬೆಂಕಿರೋಗ ನಿರೋಧಕತೆಯನ್ನು ಹೊಂದಿದೆ. ಕೆಫು ಬಣ್ಣ ಹೊಂದಿದ್ದು ಇದರಿಮದ ತಯಾರಿಸಿದ ರಾಗಿ ಮುದ್ದೆಯ ಬಣ್ಣ, ಗುಣಮಟ್ಟವೂ ಚೆನ್ನಾಗಿದೆ. ಮುದ್ದೆ ಬೇಗ ಹಳಸುವುದಿಲ್ಲ’ ಎಂದು ವಿವರಿಸಿದರು.
ಪ್ರೋಟೀನ್ ಯುಕ್ತ ಬೀಜದ ದಂಟು‘ಹೆಚ್ಚು ಪ್ರೋಟೀನ್ ಇರುವ ಕೆಬಿಜಿಎ 18 ಬೀಜದ ದಂಟನ್ನು ಸಂಶೋಧನೆ ಮಾಡಿದ್ದು ಹೆಕ್ಟೇರ್ಗೆ 22 ರಿಂದ 24 ಕ್ವಿಂಟಲ್ ಇಳುವರಿ ಸಿಗಲಿದೆ. ಸದೃಢ ಕಾಂಡ ಹೊಂದಿದ್ದು ಬಾಗುವಿಕೆಗೆ ನಿರೋಧತೆಯನ್ನು ಹೊಂದಿದೆ. ಎಲೆ ತುಕ್ಕು ಮತ್ತು ಎಲೆ ಚುಕ್ಕೆ ರೋಗಕ್ಕೆ ಹಾಗೂ ಪ್ರಮುಖ ಕೀಟಗಳಿಗೆ ನಿರೋಧಕ ಶಕ್ತಿ ಹೊಂದಿದೆ. ಬೀಜ ಉದುರುವ ಪ್ರಮಾಣ ಕಡಿಮೆ ಇದೆ. ಹೆಚ್ಚು ಪ್ರೋಟೀನ್ ಅಂಶಗಳನ್ನು ಈ ಬೀಜದ ದಂಟು ಹೊಂದಿದೆ’ ಎಂದು ತಳಿ ಅಭಿವೃದ್ಧಿ ವಿಜ್ಞಾನಿ ಡಾ.ನಂದಿನಿ ತಿಳಿಸಿದ್ದಾರೆ.
ಬಹುಪಯೋಗಿ ಮುಸುಕಿನ ಜೋಳಮುಸುಕಿನ ಜೋಳದ ಎಂಎಎಚ್ 20-45 ಹೈಬ್ರಿಡ್ ತಳಿಯನ್ನು ಸಂಶೋಧಿಸಲಾಗಿದ್ದು 125 ರಿಂದ 130 ದಿನದಲ್ಲಿ ಕಟಾವಿಗೆ ಬರಲಿದೆ. ಹೆಕ್ಟೇರ್ಗೆ 110 ರಿಂದ 115 ಕ್ವಿಂಟಾಲ್ ಇಳುವರಿ ಬರಲಿದ್ದು ಗಟ್ಟಿಯಾದ ಹಾಗೂ ಬಲಿಷ್ಠ ಕಾಂಡ, ಅಗಲ ಮತ್ತು ಮಂದ ಎಲೆಗಳನ್ನು ಹೊಂದಿದ್ದು ಮೇವಿಗೂ ಸಹಕಾರಿಯಾಗಲಿದೆ. ಎಲೆ ಅಂಗಮಾರಿ ರೋಗಕ್ಕೆ ಸಹಿಷ್ಣುತೆ ಹಾಗೂ ಕೇದಿಗೆ ರೋಗಕ್ಕೆ ಮಧ್ಯಮ ಸಹಿಷ್ಣುತೆಯನ್ನು ಹೊಂದಿದೆ. ಈ ತಳಿಯ ವಿಶೇಷತೆ ಬಗ್ಗೆ ಮಾಹಿತಿ ನೀಡಿದ ತಳಿ ಅಭಿವೃದ್ಧಿ ವಿಜ್ಞಾನಿ ಡಾ.ಪಿ.ಮಹದೇವು, ‘ಸಾಮಾನ್ಯ ಹವಾಮಾನ ಸಂದರ್ಭದಲ್ಲಿಯೂ ಉತ್ಕೃಷ್ಟ ಇಳುವರಿ ಪಡೆಯಬಹುದು. ಎಲೆಗಳು ಅಗಲವಾಗಿದ್ದು ದಪ್ಪ ಕಾಂಡ ಹೊಂದಿದೆ. ಎಕರೆಗೆ 18 ರಿಂದ 20 ಟನ್ ಹಸಿರು ಮೇವು ಸಿಗುತ್ತದೆ. ಎಥೆನಾಲ್ ಉತ್ಪಾದನೆಗೂ ಇದನ್ನು ಬಳಸಬಹುದು’ ಎಂದು ಸ್ಪಷ್ಟಪಡಿಸಿದರು.