ಎಲ್ಲೆಡೆ ದಿಗ್ಬ್ರಮೆ: ಮೃತರ ಕುಟುಂಬಕ್ಕೆ ₹೫ ಲಕ್ಷ ಪರಿಹಾರ ಘೋಷಿಸಿದ ಸಿಎಂ

KannadaprabhaNewsNetwork |  
Published : May 25, 2026, 02:30 AM IST
ಮಾಜಿ ಶಾಸಕ ಸುನೀಲ ನಾಯ್ಕ ಭಟ್ಕಳ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. | Kannada Prabha

ಸಾರಾಂಶ

ಭಟ್ಕಳದ ಶಿರಾಲಿಯ ತಟ್ಟಿಹಕ್ಲಿನಲ್ಲಿ ನಡೆದ ದುರ್ಘಟನೆಗೆ ಜಿಲ್ಲೆ, ರಾಜ್ಯಾದ್ಯಂತ ಸಂತಾಪ ವ್ಯಕ್ತವಾಗಿದೆ. ದುರ್ಘಟನೆಯಿಂದ ಭಾನುವಾರ ಇಡೀ ಮೀನುಗಾರಿಕೆ ಸ್ತಬ್ಧಗೊಂಡಿತ್ತು. ಎಲ್ಲೆಲ್ಲೂ ಹೀಗಾಗಬಾರದಿತ್ತು ಎನ್ನುವುದು ಕೇಳಿ ಬಂದಿದೆ.

ಇಂದು ಮುಖ್ಯಮಂತ್ರಿ ಆಗಮಿಸುವ ಸಾಧ್ಯತೆ । ಆಸ್ಪತ್ರೆ ಮುಂದೆ ಸೇರಿದ ಜನಸಾಗರ, ಶೋಕ । ಹಲವು ಮುಖಂಡರು, ಅಧಿಕಾರಿಗಳ ಭೇಟಿಕನ್ನಡಪ್ರಭ ವಾರ್ತೆ ಭಟ್ಕಳ

ಭಟ್ಕಳದ ಶಿರಾಲಿಯ ತಟ್ಟಿಹಕ್ಲಿನಲ್ಲಿ ನಡೆದ ದುರ್ಘಟನೆಗೆ ಜಿಲ್ಲೆ, ರಾಜ್ಯಾದ್ಯಂತ ಸಂತಾಪ ವ್ಯಕ್ತವಾಗಿದೆ. ದುರ್ಘಟನೆಯಿಂದ ಭಾನುವಾರ ಇಡೀ ಮೀನುಗಾರಿಕೆ ಸ್ತಬ್ಧಗೊಂಡಿತ್ತು. ಎಲ್ಲೆಲ್ಲೂ ಹೀಗಾಗಬಾರದಿತ್ತು ಎನ್ನುವುದು ಕೇಳಿ ಬಂದಿದೆ. ಮಳೆ ಬಂದಿರುವುದರಿಂದ ಮಳವಿ ಹೆಚ್ಚು ಸಿಗಲಿದೆ, ಬೇಗ ಹೋಗಿ ಬೇಗ ಬಂದರಾಯಿತು ಎಂದು ಮಳವಿ ಸಂಗ್ರಹಿಸಲು ಹೋಗಿದ್ದವರು ನೀರುಪಾಲಾಗುವಂತೆ ಮಾಡಿದೆ. ದುರ್ಘಟನೆಯಿಂದ ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭಟ್ಕಳಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಖ್ಯಮಂತ್ರಿ ಸಂತಾಪ:

ಭಟ್ಕಳದ ನದಿಯಲ್ಲಿ ನಡೆದ ಘೋರ ದುರಂತದ ಸುದ್ದಿ ತಿಳಿಯುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಘಾತ ವ್ಯಕ್ತಪಡಿಸಿದ್ದಲ್ಲದೇ, ಸಂತಾಪ ಸೂಚಿಸಿದ್ದರಲ್ಲದೇ ಮೃತರ ಕುಟುಂಬಕ್ಕೆ ₹೫ ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಿಂದ ಸಂತಾಪ ಸೂಚಿಸಿದ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಭಟ್ಕಳ ವೆಂಕಟಾಪುರ ನದಿಗೆ ಮಳವಿ (ಕಪ್ಪೆಚಿಪ್ಪು) ಆರಿಸಲು ಹೋಗಿ 10 ಜನರು ಮೃತಪಟ್ಟಿರುವ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಸಹಾಯಕ ಆಯುಕ್ತ ಮಹೇಶ ಜಿ., ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಹೆಚ್ಚುವರಿ ಎಸ್.ಪಿ. ಕೃಷ್ಣಮೂರ್ತಿ, ಡಿ.ವೈ.ಎಸ್.ಪಿ. ಗಿರೀಶ್, ಇನ್‌ಸ್ಪೆಕ್ಟರ್ ದಿವಾಕರ ಪಿ.ಎಂ., ಹಾಗೂ ಅಧಿಕಾರಿಗಳು ಭೇಟಿ ಕೊಟ್ಟು ಸೂಕ್ತ ವ್ಯವಸ್ಥೆ ಕಲ್ಪಿಸಿದರು.

ನದಿಯಲ್ಲಿ ಮುಳುಗಿದ್ದವರನ್ನು ಮೇಲೆತ್ತಲು ಸ್ಥಳೀಯರು ಹಾಗೂ ಮೀನುಗಾರರು ಸಹಕರಿಸಿದರು. ಇಬ್ಬರು ನೀರಿನಲ್ಲಿ ಮುಳುಗಿ ಗಂಭೀರವಾಗಿರುವುದನ್ನು ತಿಳಿದು ತಕ್ಷಣ ಅವರಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತರುತ್ತಲೇ ಸಾವಿರಾರು ಜನರು ಸೇರಿದ್ದು, ಎಲ್ಲರೂ ತೀವ್ರ ಸಂತಾಪ ಸೂಚಿಸಿದರು. ಹಲವರು ತಮ್ಮ ಮನೆಯ ಸದಸ್ಯರಂತೆ ಕಣ್ಣೀರಿಟ್ಟರು.

ಮಾಜಿ ಶಾಸಕ ಸುನೀಲ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಬಿಜೆಪಿ ಬ್ಲಾಕ್ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಜಿಲ್ಲಾಧಿಕಾರಿ, ಎಸ್.ಪಿ. ಭೇಟಿ:

ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಭಟ್ಕಳಕ್ಕೆ ಭೇಟಿ ನೀಡಿ ಬೆಳಗ್ಗೆ ನಡೆದ ದುರಂತದ ಕುರಿತು ಮಾಹಿತಿ ಪಡೆದುಕೊಂಡರು. ನೀರಲ್ಲಿ ಕಣ್ಮರೆಯಾದವರ ಪತ್ತೆಗೆ ಶ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ಅವರು ಮೃತದೇಹದ ವೈದ್ಯಕೀಯ ತಪಾಸಣೆ ನಡೆಸಿ ಮೃತರ ವಾರಿಸುದಾರರಿಗೆ ದೇಹವನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಘಟನೆಗೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಲಾಗುವುದು ಎಂದೂ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟದ ಶಿಕ್ಷಣವೇ ಸರ್ಕಾರಿ ಶಾಲೆಗಳ ಮೂಲ ಆಶಯ: ನಾಗೇಂದ್ರಪ್ಪ
ಆರೋಗ್ಯಪೂರ್ಣ ಜೀವನಕ್ಕೆ ಬ್ಲಡ್ಡು, ದುಡ್ಡು ಬೇಕು-ಶಿವಬಸವ ಶ್ರೀ