ಭಟ್ಕಳದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ: ಹೊಳೆಯಾದ ಹೆದ್ದಾರಿಗೆ ತೋಡಿದ ರಸ್ತೆ

KannadaprabhaNewsNetwork |  
Published : May 25, 2026, 02:15 AM IST
ಭಟ್ಕಳದ ರಂಗಿನಕಟ್ಟೆಯಲ್ಲಿ ಹೆದ್ದಾರಿಗಾಗಿ ತೋಡಿದ ಗುಂಡಿಯಲ್ಲಿ ಮಳೆ ನೀರು ತುಂಬಿರುವುದು. | Kannada Prabha

ಸಾರಾಂಶ

ತಾಲೂಕಿನಾದ್ಯಂತ ಭಾನುವಾರ ಬೆಳಗಿನ ಜಾವ ಗುಡುಗು ಸಿಡಿಲು ಗಾಳಿಯ ಜೊತೆ ಭಾರೀ ಮಳೆ ಸುರಿದಿದ್ದು, ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ತಗ್ಗು ಪ್ರದೇಶದಲ್ಲಿ ಮಳೆ ನೀರು ಆವರಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಭಾರೀ ತೊಂದರೆ ಉಂಟಾಯಿತು.

ಜನರ ಅಸಮಾಧಾನ: ಶೀಘ್ರ ಕಾಮಗಾರಿ ಮುಗಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನಾದ್ಯಂತ ಭಾನುವಾರ ಬೆಳಗಿನ ಜಾವ ಗುಡುಗು ಸಿಡಿಲು ಗಾಳಿಯ ಜೊತೆ ಭಾರೀ ಮಳೆ ಸುರಿದಿದ್ದು, ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ತಗ್ಗು ಪ್ರದೇಶದಲ್ಲಿ ಮಳೆ ನೀರು ಆವರಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಭಾರೀ ತೊಂದರೆ ಉಂಟಾಯಿತು.

ಪಟ್ಟಣದ ರಂಗಿನಕಟ್ಟೆಯಿಂದ ತಾಪಂವರೆಗೆ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಒಂದು ಬದಿ ರಸ್ತೆ ನಿರ್ಮಿಸಿ ಮತ್ತೊಂದು ಕಡೆ ರಸ್ತೆ ನಿರ್ಮಾಣಕ್ಕೆ ಹೊಂಡ ತೋಡಿ ಇಡಲಾಗಿದೆ. ಭಾರೀ ಮಳೆಗೆ ಈ ಹೊಂಡದುದ್ದಕ್ಕೂ ಮಳೆ ನೀರು ತುಂಬಿ ಅವಾಂತರವೇ ಸೃಷ್ಟಿ ಆಯಿತು. ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಮಾಡಲಾಗುತ್ತಿದ್ದರೂ ಒಂದು ವಾರದೀಚಿಗೆ ಕಾಮಗಾರಿ ವೇಗ ಕಂಡುಕೊಂಡಿದೆ. ಮಳೆ ಆರಂಭವಾಗಿದ್ದರಿಂದ ರಸ್ತೆಯಲ್ಲೆಲ್ಲಾ ನೀರು ಎನ್ನುವಂತಾಗಿದೆ. ರಂಗಿನಕಟ್ಟೆಯಿಂದ ತಾಪಂವರೆಗೂ ಹೆದ್ದಾರಿಯನ್ನು ಎತ್ತರಕ್ಕೆ ಮಾಡಿ ತಗ್ಗು ಪ್ರದೇಶದಲ್ಲಿ ಸರ್ವಿಸ್ ರಸ್ತೆ ಮಾಡುವ ಉದ್ದೇಶ ಹೊಂದಲಾಗಿದೆ. ಗಟಾರ ಕಾಮಗಾರಿ ಮಾಡುತ್ತಿದ್ದರೂ ಸಹ ಮುಗಿದಿಲ್ಲ. ಒಟ್ಟಾರೆ ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿಯ ಅಧ್ವಾನ ಜನರಿಗೆ ತೊಂದರೆಯಾಗಿ ಪರಿಣಮಿಸಿದೆ. ಭಟ್ಕಳ ಪಟ್ಟಣಕ್ಕೆ ಬಂದರೆ ಹೆದ್ದಾರಿ ಕಾಮಗಾರಿಯಿಂದಾಗಿ ವಾಹನಗಳಿಗೆ ಯಾವ ದಾರಿಯಲ್ಲಿ ಸಾಗಬೇಕು ಎನ್ನುವುದೇ ಗೊಂದಲ. ಹೆದ್ದಾರಿ ಕಾಮಗಾರಿ ಬೇಗ ಮುಗಿದರೆ ಸಾಕು ಎಂದು ಜನರು ಹೇಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಕಾಮಗಾರಿಯಿಂದಾಗಿ ವಾಹನ ಸಂಚಾರಕ್ಕೂ ಸಹ ತೊಂದರೆ ಉಂಟಾಗಿದೆ.

ಭಟ್ಕಳದ ಸರ್ಕಲ್ ಮಾರ್ಗದಲ್ಲಿ ಸಂಚರಿಸುವ ವಾಹನಿಗರು ಪರದಾಡುವಂತಾಗಿದೆ. ಸದ್ಯಕ್ಕೆ ಒಂದೇ ರಸ್ತೆ ಮಾಡಿದ್ದರಿಂದ ವಾಹನ ಸಂಚಾರ ಮಾಡುವಾಗ ಸ್ವಲ್ಪ ಯಾಮಾರಿದರೂ ಅಪಘಾತ ಖಂಡಿತ. ಭಾನುವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಹೆದ್ದಾರಿ ಗೆ ತೋಡಿದ ಗುಂಡಿಯಲ್ಲಿ ನೀರು ನಿಂತು ಉದ್ದದ ಹೊಳೆಯಾಗಿ ಮಾರ್ಪಟ್ಟಿತ್ತು. ಶೀಘ್ರದಲ್ಲಿ ಕಾಮಗಾರಿ ಮುಗಿಸಿದರೆ ಜನರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಜನರ ಗೋಳು ತಪ್ಪಿದ್ದಲ್ಲ ಎನ್ನುವಂತಾಗಿದೆ. ಭಾರೀ ಮಳೆಗೆ ವಿದ್ಯುತ್ ಕೂಡ ಕಣ್ಮರೆ ಆಗಿತ್ತು. ಬೆಳಗ್ಗೆ 10 ಗಂಟೆಯ ನಂತರ ವಿದ್ಯುತ್ ಬಂದಿತ್ತು. ಭಾರೀ ಗುಡುಗು ಸಿಡಿಲಿಗೆ ಹಲವು ಮನೆಗಳ ಎಲೆಕ್ಟ್ರಾನಿಕ್ ಸಾಮಗ್ರಿಗಳು ಸುಟ್ಟು ಹೋಗಿದೆ. ಭಾರೀ ಮಳೆಗೆ ಎಲ್ಲೆಲ್ಲಿ ಹಾನಿ ಸಂಭವಿಸಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

29ರಿಂದ ಶಾಲಾರಂಭ, ಪುಸ್ತಕಗಳು ಸಿದ್ಧ
ಮರಳು ಟೆಂಡರ್ ಪ್ರಕ್ರಿಯೆ ಕಾನೂನುಬಾಹಿರ: ಆರೋಪ