ಹಾವೇರಿ ಜಿಲ್ಲೆ ರೈತರಿಗೆ ಮಾತ್ರ ಈ ಭಾಗ್ಯ ದಕ್ಕಿಲ್ಲ. ಬದಲಾಗಿ ರೈತರಿಂದ ಹಾಲು ಖರೀದಿ ದರ 3.50 ರು. ಕಡಿಮೆ ಮಾಡಲಾಗಿದೆ.
ಹಾವೇರಿ : ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರ ರಾಜ್ಯಾದ್ಯಂತ 4 ರು. ಹೆಚ್ಚಳ ಮಾಡಿ, ಈ ಹೆಚ್ಚುವರಿ ಹಣವನ್ನು ಹಾಲು ಉತ್ಪಾದಿಸುವ ರೈತರಿಗೆ ವರ್ಗಾಯಿಸಿದೆ. ಹೀಗಾಗಿ ಹಾಲು ಮಾರಾಟ ಮಾಡುವ ರೈತರಿಗೆ ಏ.1ರಿಂದಲೇ ಪ್ರತಿ ಲೀಟರ್ ಹಾಲಿಗೆ 4 ರು. ಹೆಚ್ಚುವರಿಯಾಗಿ ಸಿಗುತ್ತಿದೆ. ಆದರೆ ಹಾವೇರಿ ಜಿಲ್ಲೆ ರೈತರಿಗೆ ಮಾತ್ರ ಈ ಭಾಗ್ಯ ದಕ್ಕಿಲ್ಲ. ಬದಲಾಗಿ ರೈತರಿಂದ ಹಾಲು ಖರೀದಿ ದರ 3.50 ರು. ಕಡಿಮೆ ಮಾಡಲಾಗಿದೆ.
ಹಾವೇರಿ ಹಾಲು ಒಕ್ಕೂಟದಲ್ಲಿ ಪ್ರತಿದಿನ 1.35 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಅದರಲ್ಲಿ ಕೇವಲ 20 ಸಾವಿರ ಲೀಟರ್ ಪ್ಯಾಕೆಟ್ ಹಾಲು ಮಾರಾಟವಾಗುತ್ತಿದೆ. ಒಕ್ಕೂಟ ಸದ್ಯ ವಾರ್ಷಿಕ ₹18 ಕೋಟಿ ನಷ್ಟದಲ್ಲಿದೆ. ಆದ್ದರಿಂದ ತಾತ್ಕಾಲಿಕವಾಗಿ ಉತ್ಪಾದಕರಿಗೆ ಹಾಲಿನ ದರ ಕಡಿತಗೊಳಿಸಲಾಗಿದೆ ಎಂದು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಾವೇರಿ ಹಾಲಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವ ಪರಿಣಾಮ ಪ್ರತಿ ತಿಂಗಳು ₹1.38 ಕೋಟಿ ಹಾನಿಯಾಗುತ್ತಿದೆ. ಸರ್ಕಾರ ಘೋಷಣೆ ಮಾಡಿದಂತೆ ಮಾರಾಟವಾಗದ ಹಾಲಿಗೂ ಹೆಚ್ಚುವರಿಯಾಗಿ ₹4 ನೇರವಾಗಿ ರೈತರಿಗೆ ವರ್ಗಾಯಿಸಿದರೆ ಈ ನಷ್ಟ ₹2 ಕೋಟಿಗೂ ಮೀರಲಿದೆ. ನಷ್ಟದಲ್ಲಿರುವ ಒಕ್ಕೂಟವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಮಾ. 21ರಂದು ಆಡಳಿತ ಮಂಡಳಿ ಸಭೆ ನಡೆಸಿ ಪ್ರತಿ ಲೀಟರ್ ಹಾಲಿಗೆ ತಾತ್ಕಾಲಿಕವಾಗಿ ₹3.50 ಕಡಿತಗೊಳಿಸಿದ್ದೇವೆ. ಸರ್ಕಾರದ ಆದೇಶದಂತೆ ಏ. 1ರಿಂದ ಪ್ರತಿ ಲೀ. ಹಾಲಿನ ದರ ₹4 ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.
ಒಕ್ಕೂಟದಲ್ಲಿ ಶೇಖರಣೆಯಾಗುವ ಹಾಲಿನಲ್ಲಿ 1.15 ಲಕ್ಷ ಲೀ. ಮಾರಾಟವಾಗದೇ ಉಳಿಯುತ್ತಿದ್ದು, ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಳ್ಳುವ ಪ್ರಯತ್ನಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೇವಲ 20 ಸಾವಿರ ಲೀ. ಹಾಲು ದ್ರವ ರೂಪದಲ್ಲಿ ಮಾರಾಟ ಆಗುತ್ತಿದೆ. ಇದರಿಂದ ಮಾತ್ರ ಒಕ್ಕೂಟಕ್ಕೆ ಲಾಭ ಆಗುತ್ತಿದೆ. ಇನ್ನುಳಿದ 1.15 ಲಕ್ಷ ಲೀ. ಹಾಲಿನಲ್ಲಿ 30 ಸಾವಿರ ಲೀಟರ್ ಹಾಲು ಕ್ಷೀರಭಾಗ್ಯ ಹಾಲಿನ ಪುಡಿ, ಬೆಣ್ಣೆ ಪರಿವರ್ತನೆ ಹಾಗೂ ಯುಎಚ್‌ಟಿ ಹಾಲಿನ ಉತ್ಪನ್ನಗಳ ತಯಾರಿಕೆಗೆ ನೀಡಲಾಗುತ್ತಿದೆ. ಇದರಲ್ಲಿ ಒಕ್ಕೂಟಕ್ಕೆ ಯಾವುದೇ ರೀತಿಯ ಲಾಭ ಸಿಗುತ್ತಿಲ್ಲ ಎಂದು ಹೇಳಿದರು.
- ರೈತರಿಗೆ ನೀಡಿದ ದರ ಹೆಚ್ಚಳ ಲಾಭ ಹಾವೇರಿಗೆ ಇಲ್ಲ
- ಹಾವೇರಿ ಹಾಲು ಒಕ್ಕೂಟಕ್ಕೆ ₹18 ಕೋಟಿ ನಷ್ಟ ಹಿನ್ನೆಲೆ--
ಖರೀದಿ ದರ ಕಡಿತ ಏಕೆ?
- ಹಾವೇರಿ ಹಾಲು ಒಕ್ಕೂಟದಲ್ಲಿ ನಿತ್ಯ 1.35 ಲಕ್ಷ ಲೀಟರ್ ಹಾಲು ಶೇಖರಣೆ
- ಆದರೆ ಅದರಲ್ಲಿ ಕೇವಲ 20 ಸಾವಿರ ಲೀಟರ್ ಪ್ಯಾಕೆಟ್ ಹಾಲು ಮಾರಾಟ
- ಇದರಿಂದ ಹಾಲು ಹಾವೇರಿ ಒಕ್ಕೂಟ ಸದ್ಯ ವಾರ್ಷಿಕ ₹18 ಕೋಟಿ ನಷ್ಟದಲ್ಲಿ
- ನಷ್ಟ ಸರಿದೂಗಿಸಲು ರೈತರಿಂದ ಹಾಲು ಖರೀದಿ ದರ ಲೀ.ಗೆ ₹3.5 ಕಡಿತ
- ಹಾವೇರಿ ಹಾಲು ಒಕ್ಕೂಟದ ನಡೆಗೆ ಹಾಲು ಉತ್ಪಾದಕರ ತೀವ್ರ ಆಕ್ರೋಶ