ವಾರದಲ್ಲಿ ನೈಸ್ ಅಕ್ರಮ ಸ್ಫೋಟಕ ಸತ್ಯ ಬಹಿರಂಗ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Sep 20, 2026, 02:15 AM IST
೧೯ಕೆಎಲ್‌ಆರ್-೧ಮಾಲೂರಿನ ವೈಟ್ ಗಾರ್ಡನ್‌ನಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆಗೆ ಚಾಲನೆ ನೀಡಿ ಮಾತನಾಡುತ್ತಿರುವ ರಾಜ್ಯ ಯುವ ನಾಯಕ ನಿಖಿಲ್ ಕುಮಾರಸ್ವಾಮಿ. | Kannada Prabha

ಸಾರಾಂಶ

ಸಚಿವ ಸ್ಥಾನ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು ಪ್ರತಿದಿನ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ.

ಮಾಲೂರು ವೈಟ್ ಗಾರ್ಡನ್‌ನಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗುಡುಗು

ಕನ್ನಡಪ್ರಭ ವಾರ್ತೆ ಕೋಲಾರ/ಮಾಲೂರು

ಶಾಸಕ ಬಾಲಕೃಷ್ಣರಿಗೆ ಸಚಿವ ಸ್ಥಾನ ಕಾಂಟ್ರಾಕ್ಟ್ ರೂಪದಲ್ಲಿ ಸಿಕ್ಕಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮತ್ತು ಕುಮಾರಸ್ವಾಮಿರನ್ನು ಅತಿಯಾಗಿ ನಿಂದಿಸಿದ್ದಕ್ಕಾಗಿಯೇ ಅವರಿಗೆ ಕಾಂಟ್ರಾಕ್ಟ್ ರೂಪದಲ್ಲಿ ಸಚಿವ ಸ್ಥಾನ ನೀಡಲಾಗಿದೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುಡುಗಿದರು.

ಮಾಲೂರಿನ ವೈಟ್ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು ಪ್ರತಿದಿನ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಹಾಗೂ ಜನತೆ ಇದನ್ನು ಒಪ್ಪುವುದಿಲ್ಲ. ಕೇವಲ ರಾಜಕೀಯ ನಿಂದನೆ ಬಿಟ್ಟು ಕೆಲಸ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ಮಾಡಲಿ ಎಂದು ಸಚಿವರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ವಾರದಲ್ಲಿ ಸ್ಫೋಟಕ ಸತ್ಯ ಬಹಿರಂಗ:

ನೈಸ್ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆ. ನೈಸ್ ಸಂಸ್ಥೆಯವರು ನೂರಾರು ಕೋಟಿ ರುಪಾಯಿ ಹಣ ಗಳಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ಸದ್ಯದಲ್ಲೇ ಬಹಿರಂಗ ಮಾಡುತ್ತೇನೆ. ನೈಸ್ ವಿಚಾರದಲ್ಲಿ ನಾನು ಇಲ್ಲಿ ಹೆಚ್ಚು ಮಾತನಾಡುವುದಿಲ್ಲ, ಮುಂದೆ ಹೋಗುತ್ತಾ ಹೋಗುತ್ತಾ ನಿಮಗೆಲ್ಲ ಗೊತ್ತಾಗುತ್ತದೆ. ಇನ್ನೊಂದು ವಾರದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ನೈಸ್ ಯೋಜನೆಯಿಂದಾಗಿ ನಮ್ಮ ಭಾಗದ ರೈತರಿಗೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. ರೈತರಿಗೆ ನ್ಯಾಯ ಕೊಡಿಸಲು ಮುಂದೆಯೂ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಅಸಹಕಾರ:

ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯದಲ್ಲಿ ಟೆಸ್ಟಿಂಗ್ ಯೂನಿಟ್ ತರಲು ಈಗಾಗಲೇ ತೀರ್ಮಾನ ಮಾಡಿದ್ದಾರೆ ಮತ್ತು ಅದಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಅವರಿಗೆ ಲಭ್ಯವಿರುವ ಭೂಮಿಯಲ್ಲಿ ಟೆಸ್ಟಿಂಗ್ ಯೂನಿಟ್ ಹಾಕಿ ಕೈಗಾರಿಕಾ ಅಭಿವೃದ್ಧಿ ಮಾಡಲು ಅವಕಾಶವಿದೆ. ಕುಮಾರಣ್ಣನಿಗೆ ಒಳ್ಳೆಯ ಹೆಸರು ಬಂದುಬಿಡುತ್ತದೆ ಎಂದು ರಾಜ್ಯ ಸರ್ಕಾರ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬೇಡಿ, ರಾಜ್ಯದ ಜನರ ಏಳಿಗೆಗಾಗಿ, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ಭವಿಷ್ಯ ಕಟ್ಟಿಕೊಡಿ ಎಂದರು.

ಓಲೈಕೆ ರಾಜಕಾರಣ ಮಾಡಬಾರದು:

ಹಬ್ಬ-ಆಚರಣೆಗಳನ್ನು ಜನ ಮುಕ್ತವಾಗಿ ೧-೨ ದಿನ ಆಚರಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗದಂತೆ ಸರ್ಕಾರ ನಡೆದುಕೊಳ್ಳಬೇಕು. ಯಾವುದೋ ಒಂದು ಸಮುದಾಯ ಅಥವಾ ಧರ್ಮವನ್ನು ಓಲೈಕೆ ಮಾಡುವುದನ್ನು ಬಿಟ್ಟು ಸರ್ವ ಜನಾಂಗದ ಜೊತೆ ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಪ್ರಸ್ತುತ ಸರ್ಕಾರ ಅದನ್ನು ಪಾಲಿಸುತ್ತಿಲ್ಲ ಎಂದು ತಿಳಿಸಿದರು.

ಸಾಲಮನ್ನಾಕ್ಕೆ ಆಗ್ರಹ:

ಇಡೀ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಆದರೆ ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ವಲ್ಪವಾದರೂ ಕಾಳಜಿ, ಚಿಂತನೆ ಮತ್ತು ಬದ್ಧತೆ ಇಲ್ಲ. ನಾನು ಕೂಡ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಮಾಡಿ ಬಂದಿದ್ದೇನೆ. ಸೂಕ್ತ ಸಮಯಕ್ಕೆ ಮಳೆಯಾಗದ ಕಾರಣ ಮಳೆಯನ್ನೇ ನೆಚ್ಚಿಕೊಂಡು ಬೆಳೆ ಬೆಳೆದಿದ್ದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಕೇವಲ ೧೦೨ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ.

ಆದರೆ ಬರ ಪರಿಸ್ಥಿತಿ ೧೦೨ ತಾಲೂಕುಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ೨೩೬ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಬೇಕು, ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಸಾಲಮನ್ನಾ ಮಾಡಬೇಕು ಎಂದರು.

ನಿಖಿಲ್‌ಗೆ ಅದ್ಧೂರಿ ಸ್ವಾಗತ:

ಮಾಲೂರು ಪಟ್ಟಣದ ವೈಟ್ ಗಾರ್ಡನ್‌ನಲ್ಲಿ ಶನಿವಾರ ಜೆಡಿಎಸ್ ಕೋರ್ ಕಮಿಟಿ ಸಭೆ ಹಾಗೂ ಸಮಾವೇಶ ಆಯೋಜಿಸಲಾಗಿತ್ತು. ಜೆಡಿಎಸ್ ಮುಖಂಡ ಹೂಡಿ ವಿಜಯಕುಮಾರ್‌ರ ಆಯೋಜನೆಯಲ್ಲಿ ನಡೆದ ಸಭೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಿದರು. ಈ ವೇಳೆ ಜೆಡಿಎಸ್ ನಾಯಕರು ಹಾಗೂ ನೂರಾರು ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿರಿಗೆ ಭರ್ಜರಿ ಸ್ವಾಗತ ಕೋರಿದರು. ಸುಮಾರು ಅರ್ಧ ಕಿ.ಮೀವರೆಗೂ ಪಟಾಕಿ ಸಿಡಿಸಿ, ಹೂಮಳೆಗರೆದು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಸಂಸದ ಎಂ.ಮಲ್ಲೇಶ್‌ಬಾಬು, ಮುಖಂಡರಾದ ಹೂಡಿ ವಿಜಯ್‌ಕುಮಾರ್, ಸಿಎಂಆರ್ ಶ್ರೀನಾಥ್, ಆನಂದರೆಡ್ಡಿ, ಮಾಲೂರು ಪ್ರಭಾಕರ್, ರಮೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನ ದರ ಲೀ.ಗೆ 8ಕ್ಕೆ ಹೆಚ್ಚಿಸಿ : ಒಕ್ಕೂಟಗಳು
ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆ - ಬೇಸಿಗೆಯಲ್ಲಿ ಕುಡಿಯುವ ನೀರಿನ ಆತಂಕ