;Resize=(412,232))
ಬೆಂಗಳೂರು : ರಾಜ್ಯದಲ್ಲಿ ಈ ಬಾರಿಯ ಮುಂಗಾರು ಮಳೆ ಕ್ಷೀಣವಾದ ಕಾರಣದಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆ ಉಲ್ಬಣಿಸಿದೆ. ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಜಲಾಶಯಗಳಲ್ಲಿ ಈ ಬಾರಿ ಸುಮಾರು 100 ಟಿಎಂಸಿ ಅಡಿಗಳಷ್ಟು ನೀರು ಕಡಿಮೆ ಶೇಖರಣೆಯಾಗಿದ್ದು, ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ದಟ್ಟವಾಗಿದೆ.
ಮಳೆ ಕೊರತೆ ಕಾರಣದಿಂದಾಗಿ ರಾಜ್ಯದ 120ಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡಿದ್ದು, ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದರ ನಡುವೆಯೇ ಮಳೆ ಕ್ಷೀಣಿಸಿದ್ದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳ ಹರಿವು ಕಡಿಮೆಯಾದ ಪರಿಣಾಮ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದು ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವಂತೆ ಮಾಡುವ ಸಾಧ್ಯತೆಗಳಿವೆ. ಅದರಲ್ಲೂ ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯಗಳಲ್ಲಿ ಶೇ.20ರಷ್ಟು ಕಡಿಮೆ ನೀರು ಸಂಗ್ರಹವಾಗಿದೆ.
ಜಲಸಂಪನ್ಮೂಲ ಇಲಾಖೆ ಮಾಹಿತಿಯಂತೆ 2024ರ ಸೆ.18ರಂದು ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ 462.60 ಟಿಎಂಸಿ ಅಡಿಗಳಷ್ಟು ನೀರಿದ್ದು, ಶೇ. 86.81ರಷ್ಟು ಭರ್ತಿಯಾಗಿದ್ದವು. ಅದೇ 2025ರ ಸೆ. 18ರಂದು 443.42 ಟಿಎಂಸಿ ಅಡಿಗಳಷ್ಟು ನೀರಿದ್ದು, ಶೇ. 83.21ರಷ್ಟು ಭರ್ತಿಯಾಗಿದ್ದವು. ಅದೇ ಈ ವರ್ಷದ ಸೆ.18ರಂದು 357.54 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದೆ. ಅಂದರೆ ಶೇ. 66.78ರಷ್ಟು ಮಾತ್ರ ಭರ್ತಿಯಾಗಿವೆ. ಅದರಲ್ಲೂ ಕಾವೇರಿ ಕೊಳ್ಳ ವ್ಯಾಪ್ತಿಯ ನಾಲ್ಕು ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ 39.79 ಟಿಎಂಸಿ ಅಡಿಗಳಷ್ಟು ಮಾತ್ರ ನೀರು ಸಂಗ್ರಹವಿದೆ.
ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿರುವ ಪರಿಣಾಮ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಎದುರಾಗುವ ಲಕ್ಷಣಗಳಿವೆ. ಅದರಲ್ಲೂ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿನ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಇನ್ನಿತರ ಜಿಲ್ಲೆ ಮತ್ತು ನಗರಗಳಿಗೆ ಬೇಸಿಗೆ ಅವಧಿಯಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಪ್ರಮುಖವಾಗಿ ಬೆಂಗಳೂರಿಗೆ 2027ರ ಜನವರಿಯಿಂದಲೇ ನೀರಿನ ಸಮಸ್ಯೆ ಉಲ್ಭಣಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಬೆಂಗಳೂರಿಗೆ ಪ್ರತಿದಿನ ಜಲಮಂಡಳಿಯು ಕಾವೇರಿ ನದಿಯಿಂದ 2225 ಎಂಎಲ್‌ಡಿ ನೀರು ಪೂರೈಸುತ್ತಿದೆ. ಅದರಂತೆ ವರ್ಷಕ್ಕೆ 28.68 ಟಿಎಂಸಿ ಮತ್ತು ಮಾಸಿಕ ಸುಮಾರು 2.35 ಟಿಎಂಸಿ ಅಡಿಗಳಷ್ಟು ಕಾವೇರಿ ನದಿ ನೀರು ಬೆಂಗಳೂರಿಗೆ ತರಲಾಗುತ್ತದೆ. ಅದರಲ್ಲಿ ಬಹುಪಾಲು ಕೆಆರ್‌ಎಸ್ ಜಲಾಶಯಗಳಿಂದ ಹರಿಯುವ ನೀರನ್ನು ನಗರಕ್ಕೆ ಪೂರೈಸಲಾಗುತ್ತದೆ. ಆದರೆ, ಸದ್ಯ ಕೆಆರ್‌ಎಸ್‌ನಲ್ಲಿ 27.83 ಟಿಎಂಸಿ ಅಡಿಗಳಷ್ಟು ನೀರಿದೆ. ಅದರಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ 19.45 ಟಿಎಂಸಿ ಅಡಿಗಳಷ್ಟನ್ನು ಮಾತ್ರ ಬಳಕೆ ಮಾಡಬಹುದಾಗಿದೆ.
ಇನ್ನು ಬೆಂಗಳೂರಿಗೆ ಮುಂದಿನ ಮೇ ತಿಂಗಳವರೆಗೆ ಸುಮಾರು 18.8 ಟಿಎಂಸಿಗಳಷ್ಟು ನೀರು ಬೇಕಾಗಲಿದೆ. ಸದ್ಯ ಡೆಡ್ ಸ್ಟೋರೇಜ್ ಹೊರತುಪಡಿಸಿ ಇರುವ 19.45 ಟಿಎಂಸಿ ಅಡಿಗಳಷ್ಟು ನೀರಿನಲ್ಲಿ 18.8 ಟಿಎಂಸಿಗಳಷ್ಟನ್ನು ಬೆಂಗಳೂರಿಗೆ ಪೂರೈಸಿದರೆ ಕೇವಲ 0.65 ಟಿಎಂಸಿಗಳಷ್ಟು ನೀರು ಮಾತ್ರ ಉಳಿಯಲಿದೆ. ಅದರ ನಡುವೆ ನೀರಿನ ಸೋರಿಕೆ, ಬಿಸಲು ಸೇರಿದಂತೆ ಮತ್ತಿತರ ಕಾರಣಗಳಿಂದ ಸದ್ಯ ಇರುವ ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗಲಿದೆ. ಹೀಗಾಗಿ ಬೆಂಗಳೂರನ್ನು ಮಾತ್ರ ನೋಡಿದರೆ ಕಾವೇರಿ ನದಿ ನೀರನ್ನು ನಂಬಿಕೊಂಡಿರುವ ಇನ್ನಿತರ ನಗರಗಳಿಗೆ ನೀರು ಪೂರೈಕೆ ಕಷ್ಟವಾಗಲಿದೆ. ಒಂದು ವೇಳೆ ಬೇಸಿಗೆ ಸಮಯದಲ್ಲಿ ನೀರು ಪೂರೈಕೆ ಸಮರ್ಪಕವಾಗಿರಬೇಕಾದರೆ ಡೆಡ್ ಸ್ಟೋರೇಜ್‌ನಿಂದಲೂ ನೀರು ತೆಗೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇಲ್ಲದಿದ್ದರೆ, ಸಮಸ್ಯೆ 2027ರ ಆರಂಭದಿಂದಲೇ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುವ ಸಾಧ್ಯತೆಗಳಿವೆ.