ಹಾಲಿನ ದರ ಲೀ.ಗೆ 8ಕ್ಕೆ ಹೆಚ್ಚಿಸಿ : ಒಕ್ಕೂಟಗಳು

Published : Sep 19, 2026, 10:18 AM IST
KMF Nandini Milk

ಸಾರಾಂಶ

ರೈತರನ್ನು ಹಾಗೂ ಹಾಲಿನ ಒಕ್ಕೂಟಗಳನ್ನು ಉಳಿಸಲು ಹಾಲಿನ ಮಾರಾಟ ಬೆಲೆಯನ್ನು ಪ್ರತಿ ಲೀಟರ್‌ಗೆ ₹8 ಮತ್ತು ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ₹8 ರಂತೆ ಏರಿಸಬೇಕು ಎಂದು ರಾಜ್ಯದ ವಿವಿಧ ಹಾಲು ಒಕ್ಕೂಟಗಳು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರಗಾಲದಿಂದ ಪಶು ಆಹಾರ, ಸಾಗಣೆ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ರೈತರನ್ನು ಹಾಗೂ ಹಾಲಿನ ಒಕ್ಕೂಟಗಳನ್ನು ಉಳಿಸಲು ಹಾಲಿನ ಮಾರಾಟ ಬೆಲೆಯನ್ನು ಪ್ರತಿ ಲೀಟರ್‌ಗೆ ₹8 ಮತ್ತು ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ₹8 ರಂತೆ ಏರಿಸಬೇಕು ಎಂದು ರಾಜ್ಯದ ವಿವಿಧ ಹಾಲು ಒಕ್ಕೂಟಗಳು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಶುಕ್ರವಾರ ಈ ಕುರಿತು ಬಮೂಲ್‌ ಮಾಜಿ ಅಧ್ಯಕ್ಷ ಪಿ.ನಾಗರಾಜ್‌, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬೋರೇಗೌಡ, ಶಿವಮೊಗ್ಗ ಒಕ್ಕೂಟದ ನಿರ್ದೇಶಕ ಸಿ.ವೀರಭದ್ರಬಾಬು, ಚಾಮರಾಜನಗರ ಹಾಲು ಒಕ್ಕೂಟದ ಎಂ.ನಂಜುಂಡಸ್ವಾಮಿ ಸೇರಿ ಇತರರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಕಳೆದ ಎಂಟು ತಿಂಗಳಿನಿಂದ ರೈತರು ಸೇರಿ ಹಾಲು ಒಕ್ಕೂಟಗಳ ನಿರ್ದೇಶಕರು ಹಾಲಿನ ದರ ಮತ್ತು ಪ್ರೋತ್ಸಾಹಧನ ಏರಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಇನ್ನು ಮೂರು ದಿನಗಳಲ್ಲಿ ದರ ಏರಿಕೆ ಮಾಡದಿದ್ದರೆ ‘ವಿಧಾನಸೌಧ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಬರದಿಂದಾಗಿ ಮೇವಿನ ಕೊರತೆ:

ಬಮೂಲ್‌ ಮಾಜಿ ಅಧ್ಯಕ್ಷ ಮತ್ತು ನಿರ್ದೇಶಕ ಪಿ.ನಾಗರಾಜ್‌ ಮಾತನಾಡಿ, ಈ ಬಾರಿ ಮುಂಗಾರು ಮಳೆ ಅಭಾವ ಮತ್ತು ತೀವ್ರ ಬರಗಾಲದಿಂದಾಗಿ ಮೇವಿನ ಕೊರತೆ ಎದುರಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಮತ್ತು ಸಂಗ್ರಹಣೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಹಿಂದೆ ದಿನಕ್ಕೆ 1.11 ಕೋಟಿ ಲೀಟರ್‌ ಇದ್ದ ಹಾಲಿನ ಸಂಗ್ರಹಣೆಯು ಈಗ 1.05 ಕೋಟಿ ಲೀಟರ್‌ಗೆ ಇಳಿಕೆಯಾಗಿದೆ. ಅಂದರೆ, ಪ್ರತಿ ದಿನ 6ರಿಂದ 7 ಲಕ್ಷ ಲೀಟರ್‌ ಹಾಲಿನ ಕೊರತೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಶು ಆಹಾರಗಳ ಬೆಲೆ ಶೇ.30ರಿಂದ 40ರಷ್ಟು ಏರಿಕೆ

ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬೋರೇಗೌಡ, ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಡೀಸೆಲ್‌, ಪೆಟ್ರೋಲ್‌, ಗ್ಯಾಸ್‌, ಎಲ್‌ಪಿಜಿ ಹಾಗೂ ಪಶು ಆಹಾರಗಳ ಬೆಲೆ ಶೇ.30ರಿಂದ 40ರಷ್ಟು ಏರಿಕೆಯಾಗಿದೆ. ಖಾಸಗಿ ಡೈರಿಗಳು ಹಾಗೂ ನೀರಿನ ಬಾಟಲಿಗಳಿಗೆ ಹೋಲಿಸಿದರೆ ನಂದಿನ ಹಾಲಿನ ಬೆಲೆ ದೇಶದಲ್ಲೇ ಅತ್ಯಂತ ಕಡಿಮೆ. ರೈತರಿಗೆ ಒಂದು ಲೀಟರ್‌ ಹಾಲು ಉತ್ಪಾದಿಸಲು ತಗಲುವ ವೆಚ್ಚಕ್ಕೆ ತಕ್ಕಂತೆ ಸೂಕ್ತ ಪ್ರತಿಫಲ ಸಿಗದೆ ಅವರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಎಂದರು.

ಸರ್ಕಾರ ತಕ್ಷಣವೇ ಸಂಪುಟ ಸಭೆ ಕರೆದು ಹಾಲಿನ ಬೆಲೆ ಏರಿಕೆ ಹಾಗೂ ಪ್ರೋತ್ಸಾಹಧನ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಮುಂಬರುವ ಮೂರು ದಿನಗಳಲ್ಲಿ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ, ರಾಜ್ಯದ ಎಲ್ಲಾ 16 ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ರೈತರು ಒಂದಾಗಿ ವಿಧಾನಸೌಧ ಚಲೋ ಬೃಹತ್‌ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆ - ಬೇಸಿಗೆಯಲ್ಲಿ ಕುಡಿಯುವ ನೀರಿನ ಆತಂಕ
ತಾಪಮಾನ ಹೆಚ್ಚಳ : ಹೀಟ್‌ಸ್ಟ್ರೋಕ್ ಹತೋಟಿಗೆ ಇಂದಿರಾ ಕ್ಯಾಂಟಿನ್‌ಗಳೇ ಕೂಲಿಂಗ್ ಸೆಂಟರ್