ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಅಶೋಕ ನಗರ ೯ನೇ ಕ್ರಾಸ್ ನಿವಾಸಿ ಎಚ್.ವಿ.ರೋಹನ್‌ಗೌಡ (೨೩), ಮರೀಗೌಡ ಬಡಾವಣೆ ಒಂದನೇ ಕ್ರಾಸ್‌ನ ಶಶಾಂಕ್ (೨೫), ದ್ವಾರಕ ನಗರದ ಅಫಾನ್ (೨೫), ಕುವೆಂಪು ನಗರ ನಂದಿ ಪಾರ್ಕ್ ನಿವಾಸಿ ಮಹಮ್ಮದ್ ಉಮರ್ (೨೫), ವಿದ್ಯಾನಗರ ೨ನೇ ಕ್ರಾಸ್‌ನ ನಿತಿನ್ (೨೭), ಗಾಂಧಿನಗರ ೧೦ನೇ ಕ್ರಾಸ್‌ನ ಮಹಮ್ಮದ್ ಅಬೂಬಕರ್ ಸಕಲೇನ್ (೨೫) ಹಾಗೂ ವಿದ್ಯಾನಗರ ೨ನೇ ಕ್ರಾಸ್‌ನ ಸಚಿನ್ (೨೯) ಬಂಧಿತ ಆರೋಪಿಗಳು.
ನಡೆದಿದ್ದೇನು?:ಮೈಸೂರಿನ ಗೋಕುಲಂ ಮೂರನೇ ಹಂತದ ನಿವಾಸಿ ಶಂಕರ್ ಕಳೆದ ೨೦ ವರ್ಷಗಳಿಂದ ಬೆಂಗಳೂರಿನ ಎಸ್.ಆರ್.ನಗರದಲ್ಲಿರುವ ಸೂಪರ್ ಸ್ಪೀಡ್ ಸರ್ವೀಸ್ ಕೊರಿಯರ್‌ನಲ್ಲಿ ಗೂಡ್ಸ್ ವಾಹನಗಳಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಜು.೨ರಂದು ಮುಂಜಾನೆ ೨ ಗಂಟೆ ಸಮಯದಲ್ಲಿ ಬೆಂಗಳೂರಿನ ಕೊರಿಯರ್ ಕಚೇರಿಯಿಂದ ಕೊರಿಯರ್ ಪಾರ್ಸೆಲ್‌ಗಳನ್ನು ಗೂಡ್ಸ್ ವಾಹನ (ಕೆಎ ೦೧-ಎ.ಬಿ.೧೩೦೦)ದಲ್ಲಿ ತುಂಬಿಕೊಂಡು ಮೈಸೂರು ಕಡೆ ಬರುತ್ತಿದ್ದರು. ಬೆಳಗಿನ ಜಾವ ಸುಮಾರು ೪.೫೦ರ ಸಮಯದಲ್ಲಿ ಮಂಡ್ಯದ ಅಮರಾವತಿ ಹೋಟೆಲ್ ಬಿಟ್ಟು ಮುಂದೆ ಭಾರತ್ ಪೆಟ್ರೋಲ್ ಬಂಕ್ ಬಳಿಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಅದೇ ರಸ್ತೆಯಲ್ಲಿ ಎಡಬದಿಯಿಂದ ಜೋರಾಗಿ ಹಾರ್ನ್ ಮಾಡಿಕೊಂಡು ಕಪ್ಪು ಬಣ್ಣದ ಫಾರ್ಚೂನರ್ ಕಾರೊಂದು ಬಂದಿತು ಎನ್ನಲಾಗಿದೆ.
ಆರೋಪಿಗಳ ಪೈಕಿ ಕಾರಿನ ಚಾಲಕ ಕಾರೊಳಗೆ ಕುಳಿತುಕೊಂಡು ಕಾರಿನ ಕಿಟಕಿ ಮೂಲಕ ಚಾಲಕನ ಕಡೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಕಾರಿನ ನಂಬರ್ ಕೆಎ-೦೫ ಎಂಬುದನ್ನು ಮಾತ್ರ ಚಾಲಕ ನೋಡಿದ್ದು, ಅದರೊಳಗೆ ಆರೇಳು ಮಂದಿ ಇದ್ದರು. ನಂತರ ಕಾರು ಚಾಲಕ ಮತ್ತು ಅದರೊಳಗಿದ್ದವರು ಕಾರನ್ನು ನಿಲ್ಲಿಸದೆ ಚಾಲನೆ ಮಾಡಿಕೊಂಡು ಸ್ಥಳದಿಂದ ಪರಾರಿಯಾದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಪ್ರೊಬೇಷನರಿ ಪಿಎಸ್‌ಐಗಳಾದ ಕಾರ್ತಿಕ್, ಹನುಮಂತರೆಡ್ಡಿ, ಎಎಸ್‌ಐ ಲಿಂಗರಾಜು, ಎಎಸ್‌ಐ ಚಿಕ್ಕಯ್ಯ, ಪೇದೆಗಳಾದ ರವಿ, ಮಹೇಶ, ಉಮರ್ ಅಹಮದ್ ಫಾರೂಕಿ, ಮಂಜುನಾಥ್, ವಿಶ್ವನಾಥ್, ಸಿದ್ದಾರ್ಥ, ಪ್ರಕಾಶ್, ಕುಮಾರ, ಮಹೇಶ್, ಕಿರಣ್, ಭುಜಂಗ, ಮಂಜುನಾಥ್ ಅವರು ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಶಶಾಂಕ್ ಬಿಇ ಪದವೀಧರ, ಅಫಾನ್ ಎಂಸಿಎ ಓದುತ್ತಿದ್ದರೆ, ಮಹಮ್ಮದ್ ಉಮರ್ ಡಿಜಿಟಲ್ ಮಾನಿಟರಿಂಗ್ ಕೆಲಸ ಮಾಡುತ್ತಿದ್ದಾನೆ. ನಿತಿನ್ ಬಿಕಾಂ ಪದವೀಧರನಾಗಿದ್ದು, ಮಹಮ್ಮದ್ ಅಬೂಬಕರ್ ಡಿ-ಫಾರ್ಮ ವಿದ್ಯಾರ್ಥಿ. ಸಚಿನ್ ಡೆಲಿವರಿ ಹೆಡ್ ಕೆಲಸ ಮಾಡಿಕೊಂಡಿದ್ದಾರೆ.
ಹಣದ ಮದದೊಂದಿಗೆ ಮದ್ಯದ ನಶೆ ಏರಿಸಿಕೊಳ್ಳುವ ವಿದ್ಯಾವಂತ ಯುವಕರು ಅಡ್ಡದಾರಿ ಹಿಡಿಯುತ್ತಾ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕುಡಿದ ಮತ್ತಿನಲ್ಲಿ ಕಾರಿನಲ್ಲಿ ಬಂದ ಆರೋಪಿಗಳು ಗೂಡ್ಸ್ ವಾಹನ ಚಾಲಕನ ಮೇಲೆ ಏರ್‌ಗನ್‌ನಿಂದ ಫೈಯರ್ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.ಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಫಾನ್ ಎಂಬಾತನ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಮಂಡ್ಯಕ್ಕೆ ಬರುತ್ತಿದ್ದರು. ಎಲ್ಲರೂ ಕುಡಿದಿದ್ದರು. ಗೂಡ್ಸ್ ವಾಹನ ಚಾಲಕ ದಾರಿ ಬಿಡಲಿಲ್ಲವೆಂಬ ಕಾರಣಕ್ಕೆ ಮುಂದೆ ಬಂದು ಫನ್‌ಗೋಸ್ಕರ ಏರ್‌ಗನ್‌ನಿಂದ ಶೂಟ್ ಮಾಡಿದ್ದಾರೆ ಎಂದು ತಿಳಿಸಿದರು.
ಕಾರು ರೋಹನ್‌ಗೌಡ ಅವರಿಗೆ ಸೇರಿದ್ದು. ಆತ ಕಾನೂನು ವಿದ್ಯಾರ್ಥಿ. ಕಾರು ಯಾರ ಹೆಸರಿನಲ್ಲಿದೆ ಎನ್ನುವುದು ಗೊತ್ತಿಲ್ಲ. ಎಲ್ಲರೂ ಬಹುತೇಕ ವಿದ್ಯಾರ್ಥಿಗಳೇ ಆಗಿದ್ದಾರೆ. ಕೆಲಸಕ್ಕೆ ಸೇರಿ ಬಿಟ್ಟಿರುವವರೂ ಇದ್ದಾರೆ. ಯಾರ ವಿರುದ್ಧವೂ ಹಿಂದೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಕಾರಿನಲ್ಲಿದ್ದವರು ಕುಡಿದಿದ್ದರು ಎನ್ನುವುದು ಗೊತ್ತಾಗಿದೆ. ಡ್ರಗ್ಸ್ ಸೇವಿಸಿದ್ದರೆ ರಕ್ತಪರೀಕ್ಷೆಯಿಂದ ಗೊತ್ತಾಗಲಿದೆ. ಎಲ್ಲಾ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಎಲ್ಲರನ್ನೂ ಮಂಡ್ಯ ನಗರದಲ್ಲೇ ಬಂಧಿಸಲಾಗಿದೆ ಎಂದು ವಿವರಿಸಿದರು.