ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಫಲಾಹಾರಸ್ವಾಮಿ ಮಠದ ಶ್ರೀ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಪ್ರಗತಿಪರ ಯುವ ಬಳಗ ನಮ್ಮ ನಡಿಗೆ ಸ್ವಚ್ಛತೆ ಕಡೆಗೆ ಅಭಿಯಾನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿ ಮಲ್ಲೇನಹಳ್ಳಿ ಪ್ರದೇಶ ಸೇರಿದಂತೆ ಇಡೀ ಮಲೆನಾಡು ನಿಸರ್ಗದತ್ತ ಸೌಂದರ್ಯದ ಖನಿಜ. ಅದನ್ನು ಮುಕ್ಕಾಗದಂತೆ ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಗ್ರಾಮೀಣರಿಂದ ಆಗಬೇಕಾಗಿದೆ ಎಂದರು.
ನೆಲ, ಜಲ, ಭೂಮಿ, ಪ್ರಕೃತಿ ಮತ್ತು ಪರಿಸರ ಸಂರಕ್ಷಿಸುವುದು ಕೇವಲ ಸರ್ಕಾರದ ಕೆಲಸವಷ್ಟೇ ಅಲ್ಲ ಅದು ನಮ್ಮೆಲ್ಲರ ಜವಾಬ್ದಾರಿ. ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಪರಿಸರವನ್ನು ಈಗಲೇ ಉಳಿಸಲು ಮುಂದಾಗದಿದ್ದರೆ ಮುಂದೊಂದು ದಿನ ಕೊಡಗಿನಲ್ಲಾದ ಅವಘಡ ಇಲ್ಲೂ ನಡೆಯುತ್ತದೆ ಎಂದು ಎಚ್ಚರಿಸಿದರು.ಮಲೆನಾಡಿನ ಸುಂದರ ಪರಿಸರ ಮುಂದಿನ ಪೀಳಿಗೆಗೆ ಉಳಿಯಲು ನಾವು ನೆಲ, ಜಲ, ಗಾಳಿ, ಪರಿಸರದ ಬಗ್ಗೆ ಪ್ರೀತಿ ಬೆಳೆಸಿ ಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.
ಜಾಮಿಯಾ ಮಸೀದಿಯ ಧರ್ಮಗುರು ಅಪ್ಸರ್ ಭಾಷಾ ಮಾತನಾಡಿ ಸ್ವಚ್ಛತೆಯಿದ್ದಲ್ಲಿ ಆರೋಗ್ಯವಿರುತ್ತದೆ ಎಂಬುದನ್ನು ಗ್ರಾಮಸ್ಥರು ಮನಗಾಣಬೇಕು. ನಮ್ಮ ಹಳ್ಳಿ ಸ್ವಚ್ಛತೆಗೆ ಸರ್ಕಾರ ಅಧಿಕಾರಿಗಳನ್ನು ಕಾಯುವ ಬದಲು ನಾವೇ ಸ್ವಚ್ಛತೆಗೆ ಮುಂದಾಗಬೇಕು ಎಂದರು.
ದೇವೀರಮ್ಮ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎ.ಕುಲಶೇಖರ್ ಮಾತನಾಡಿ ಹೋಂ ಸ್ಟೇಗಳು ಹೆಚ್ಚಳವಾದ ನಂತರ ಗ್ರಾಮ ಮತ್ತು ಸುತ್ತಮುತ್ತಲ ಪರಿಸರ ಹಾಳಾಗುತ್ತಿದೆ. ಅದನ್ನು ತಡೆಗಟ್ಟುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಶ್ಮಿತಾ, ಇಮ್ಯಾನ್ಯುಯೆಲ್ ಚರ್ಚಿನ ಖಜಾಂಚಿ ಮೋಸಸ್ ಸುರೇಶ್, ದಸಂಸ ಮುಖಂಡ ಪಿ.ವೇಲಾಯುಧನ್, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಮಾಲೋಚಕ ನಾಗರಾಜ್, ಎಂ.ಪಿ.ಗಣೇಶ್, ವೈದ್ಯಾಧಿಕಾರಿ ಡಾ ತಿಪ್ಪೇಸ್ವಾಮಿ, ಪ್ರೌಢಶಾಲಾ ಶಿಕ್ಷಕ ವೆಂಕಟೇಶ್, ಉಪವಲಯ ಅರಣ್ಯಾಧಿಕಾರಿ ಉಮೇಶ್ ಉಪಸ್ಥಿರಿದ್ದರು.