ಕನ್ನಡಪ್ರಭ ವಾರ್ತೆ ಮೈಸೂರು
ತೀವ್ರ ನಿಗಾ ಘಟಕದ ವೈದ್ಯರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಪೆಥಾಲಜಿಸ್ಟ್ ನೀಡುವ ವರದಿಯ ಮೇಲೆಯೇ ಅವಲಂಬಿತವಾಗಿರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಪೆಥಾಲಜಿಸ್ಟ್ ಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮ ಕುಲಾಧಿಪತಿ ಡಾ.ಬಿ. ಸುರೇಶ್ ತಿಳಿಸಿದರು.ಶಿವರಾತ್ರೀಶ್ವರನಗರದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರದಿಂದ ಕೆಸಿಐಎಪಿಎಂ ಸಹಯೋಗದಲ್ಲಿ ಆಯೋಜಿಸಲಾಗಿರುವ 3 ದಿನಗಳ ರಾಜ್ಯ ಮಟ್ಟದ ಪೆಥಾಲಜಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಕೃತ್ತು ಅಥವಾ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಪ್ರಶಂಸೆ ಶಸ್ತ್ರಚಿಕಿತ್ಸಕರಿಗೆ ಸಿಗುತ್ತದೆ. ಆದರೆ, ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕದ ಮುಂದೆ ಕುಳಿತು ನಿಖರ ವರದಿ ನೀಡುವ ಪೆಥಾಲಜಿಸ್ಟ್ ಗಳ ಶ್ರಮ ತೆರೆಯಮರೆಯಲ್ಲೇ ಉಳಿದು ಬಿಡುತ್ತದೆ ಎಂದು ಹೇಳಿದರು.
ವೈದ್ಯಕೀಯ ರಂಗದಲ್ಲಿ ಮೊದಲು ಸಂಪೂರ್ಣವಾಗಿ ವೈದ್ಯರ ಕ್ಲಿನಿಕಲ್ ಜ್ಞಾನ ಮತ್ತು ರೋಗಲಕ್ಷಣಗಳ ಅವಲೋಕನದ ಮೇಲಿದ್ದ ಆಧಾರವಾಗಿತ್ತು. ನಂತರ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಗಳಂತಹ ವೈದ್ಯಕೀಯ ಚಿತ್ರಣ ತಂತ್ರಜ್ಞಾನಗಳ ಆಗಮನವಾಯಿತು. ಪ್ರಸ್ತುತ ನಾವು ಕೃತಕ ಬುದ್ಧಿಮತ್ತೆ (ಎಐ) ಮತ್ತು ನಿಖರ ವೈದ್ಯಕೀಯ ಯುಗಕ್ಕೆ ಕಾಲಿಟ್ಟಿದ್ದು, ಇದು ರೋಗನಿರ್ಣಯವನ್ನು ಇನ್ನಷ್ಟು ವೇಗ ಹಾಗೂ ನಿಖರಗೊಳಿಸಲಿದೆ ಎಂದರು.ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಟಿಷ್ಯೂ ಬ್ಯಾಂಕ್ ಸ್ಥಾಪಿಸಲಾಗಿದೆ. ಕರ್ನಾಟಕದಲ್ಲೇ ಇಂತಹ ಸೌಲಭ್ಯ ಹೊಂದಿರುವ ಮೊದಲ ಕೇಂದ್ರಗಳಲ್ಲಿ ಇದು ಒಂದಾಗಿದ್ದು, ಯುವ ಪಾಥಾಲಜಿಸ್ಟ್ ಗಳು ಅಂಗಾಂಶ ಮಾದರಿಗಳನ್ನು ಬಳಸಿಕೊಂಡು ಭವಿಷ್ಯದ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ಇದು ದೊಡ್ಡ ವೇದಿಕೆಯಾಗಲಿದೆ ಎಂದು ಅವರು ತಿಳಿಸಿದರು.
ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನ ಡಾ. ಸುರೇಶ್ ಹನಗವಾಡಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್. ಬಸವನಗೌಡಪ್ಪ, ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ನಾರಾಯಣಪ್ಪ, ಕೆಸಿಐಎಪಿಎಂ ಅಧ್ಯಕ್ಷ ಡಾ.ಕೆ.ವಿ.ಸಂತೋಷ್, ಕಾರ್ಯದರ್ಶಿ ಡಾ. ಆದಿತ್ಯ ಅಗ್ನಿಹೋತ್ರಿ, ಖಜಾಂಚಿ ಡಾ. ತೇಜಸ್ವಿ ಕೃಷ್ಣ, ಡಾ. ವಿಜಯಶಂಕರ, ಡಾ.ಆಶಾ, ಡಾ.ಸುಚಿತ್ರಾ, ಡಾ.ರಾಜಲಕ್ಷ್ಮಿ ಮೊದಲಾದವರು ಇದ್ದರು.