ಕನ್ನಡಪ್ರಭ ವಾರ್ತೆ ಮೈಸೂರು
ಆಧುನಿಕ ತಂತ್ರಜ್ಞಾನವನ್ನು ಒತ್ತೊಯ್ಯುತ್ತಿರುವ ಸಾಮಾಜಿಕ ಜಾಲತಾಣವೆಂಬ ಜಾಲದೊಳಗೆ ಹರಿಹರೆಯದ ಮಕ್ಕಳು ಸಿಲುಕಿ ಶಾಲೆಯಿಂದ ಹೊರಗುಳಿದು ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಾ ಲೈಂಗಿಕ ಶೋಷಣೆ ಎಂಬ ಪಿಡುಗಿಗೆ ಒಳಗಾಗುತ್ತಿರುವುದನ್ನು ಇಂದಿನ ಸಮಾಜ ಎಚ್ಚರದಿಂದ ಗಮನಿಸಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹೊಂದಿಸಲ್ಪಟ್ಟ ಮೊಬೈಲ್ ತಂತ್ರಜ್ಞಾನವು ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ. ನಾಗರಾಜು ಕಳವಳ ವ್ಯಕ್ತಪಡಿಸಿದರು.ಒಡನಾಡಿ ಸೇವಾ ಸಂಸ್ಥೆಯು ತನ್ನ ರಾಜಶೇಖರ ಕೋಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾನವ ಕಳ್ಳ ಸಾಗಾಣಿಕೆಯ ಹೊಸ ಆಯಾಮಗಳು ಮತ್ತು ಭಾರತೀಯ ನ್ಯಾಯ ಸಂಹಿತೆ’ ಎಂಬ ವಿಷಯದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಡನಾಡಿ ಸೇವಾ ಸಂಸ್ಥೆಯು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಲ್ಲಿ ನೀಡಿರುವ ಮಾದರಿಯು ಅನುಕರಣೀಯ ಮತ್ತು ಅಗತ್ಯವಾಗಿದೆ ಎಂದು ಶ್ಲಾಘಿಸಿದರು.
ಮಾನವ ಕಳ್ಳ ಸಾಗಾಣಿಕೆಯ ಸ್ವರೂಪ ಬದಲಾಗುತ್ತಾ ಸಾಗುತ್ತಿದೆ ಮಕ್ಕಳನ್ನು ಒತ್ತೊಯ್ಯುವ ಜಾಲಗಳು ಕಾನೂನು ಹಾಗೂ ತಂತ್ರಜ್ಞಾನದಲ್ಲಿ ಪರಿಣಿತರಾಗುತ್ತಿದ್ದಾರೆ, ಹೊಸ ಹೊಸ ತಂತ್ರಗಳನ್ನು ಬಳಸಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಸಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಏಕತೆಯ ಪ್ರಯತ್ನ ಅತ್ಯಗತ್ಯ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸಂವೇದನಾಶೀಲ ಸಮಾಜವು ಏಕ ಧ್ವನಿಯನ್ನು ಮೊಳಗಿಸಬೇಕು ಎಂದರು.ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿಪ್ರಸಾದ್ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಎಲ್ಲಾ ರೀತಿಯ ಕ್ರೌರ್ಯಗಳು ಸಂಜ್ಞೆಯ ಪ್ರಕರಣಗಳಾಗಿದ್ದು ಇವುಗಳನ್ನು ದಾಖಲಿಸುವಲ್ಲಿ ಇಲಾಖೆಯ ಮುಖ್ಯ ಪೇದೆ ಶ್ರೇಣಿ ಹಾಗೂ ಮೇಲ್ಪಟ್ಟ ಅಧಿಕಾರಿಗೆ ಎಲ್ಲಾ ರೀತಿಯ ಅಧಿಕಾರವಿರುತ್ತದೆ, ಆದಾಗ್ಯೂ ಅಪರಾಧವನ್ನು ವರದಿ ಮಾಡುವುದು ಮತ್ತು ಪತ್ತೆ ಮಾಡುವಲ್ಲಿ ಇಲಾಖೆಗೆ ಸಮಾಜದ ಎಲ್ಲಾ ಅಂಗಗಳಿಂದಲೂ ಸಹಕಾರ ಅತ್ಯಗತ್ಯವಾಗಿದೆ ಅಪರಾಧಿಗಳು ಚಾಪೆ ಕೆಳಗೆ ನುಸುಳುವಂತವರಾಗಿರುವುದರಿಂದ ದೌರ್ಜನ್ಯವನ್ನು ತಡೆಗಟ್ಟಲು ಶ್ರಮಿಸುವ ಇಲಾಖೆಗಳು ಮತ್ತು ಸಂಘ-ಸಂಸ್ಥೆಗಳು ರಂಗೋಲಿಯ ಕೆಳಗೆ ನುಸುಳುವುದನ್ನು ಕಲಿಯಬೇಕು, ಈ ನಿಟ್ಟಿನಲ್ಲಿ ಹೊಸ ಹೊಸ ಕಾನೂನುಗಳ ಅಧ್ಯಯನ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳ ಮನವರಿಕೆ, ಪ್ರತಿಯೊಬ್ಬರಿಗೂ ಅಗತ್ಯವಿದೆ
ಎಂದರು.
ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ಮಾತನಾಡಿ, ಈ ಕಾರ್ಯಕ್ರಮವನ್ನು ಒಡನಾಡಿಯು ಸಂಘ ಸಂಸ್ಥೆಗಳಗಳೊಂದಿಗೆ ಮಕ್ಕಳ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಇಲಾಖೆಗಳ ಸಿಬ್ಬಂದಿಗಳಿಗೆ ಪುನಶ್ಚೇತನ ನೀಡುವ ಆಶಯದೊಂದಿಗೆ ಕಾಲಕಾಲಕ್ಕೆ ನಡೆಸುತ್ತಾ ಬರುತ್ತಿದೆ, ಕಳೆದ 37 ವರ್ಷಗಳಿಂದ ಸಂಸ್ಥೆಯು ಪಡೆದಿರುವ ಅನುಭವ ಹಾಗೂ ಎದುರಿಸಿದ ಸವಾಲುಗಳನ್ನು ಹೊಸ ತಲೆಮಾರಿನ ಕಾರ್ಯಕರ್ತರುಗಳಿಗೆ ಕಾನೂನಾತ್ಮಕ ತರಬೇತಿಗಳ ಮೂಲಕ ಧಾರೆ ಎರೆಯುವುದು ಇಂದಿನ ಮುಖ್ಯ ಅಗತ್ಯವಾಗಿದೆ. ಅಲ್ಲದೆ ಕಾಣೆಯಾದ ಮಕ್ಕಳ ರಕ್ಷಣೆ, ಪುನರ್ವಸತಿ ಹಾಗೂ ಭವಿಷ್ಯ ನಿರ್ಮಾಣದಲ್ಲಿ ಸಮಾಜದ ಎಲ್ಲಾ ಪ್ರಜ್ಞಾವಂತ ಅಂಗಗಳು ಸಮಷ್ಠಿ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಹಾಗೂ ನಮ್ಮ ತಿಳುವಳಿಕೆಯ ಮಟ್ಟವನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾಗಿದೆ, ಈ ನಿಟ್ಟಿನಲ್ಲಿ ಇಂದಿನ ತರಬೇತಿ ಪ್ರಸ್ತುತ ಎಂದರು.
ಒಡನಾಡಿಯ ಮತ್ತೋರ್ವ ನಿರ್ದೇಶಕ ಎಂ.ಎಲ್. ಪರಶುರಾಮ್ ಮಾತನಾಡಿ ಮಾನವೀಯತೆ ಮತ್ತು ಕರುಣೆ ಅಪರಾಧ ತಡೆಗಟ್ಟುವಿಕೆಯಲ್ಲಿ ಪ್ರಮುಖವಾದ ಅಂಶ ಎಂದರು.ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ವಿಜಯ್ ಹಾಗೂ ರಶ್ಮಿ ಮಾತನಾಡಿದರು. ಈ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ, ಸಖಿ ಒನ್ ಸ್ಟಾಪ್ ಸೆಂಟರ್, ಬಾಲಕಿಯರ ಬಾಲಮಂದಿರ, ಸಾಂತ್ವನ ಸಹಾಯವಾಣಿ, ಒಡನಾಡಿ ಸೇವಾ ಸಂಸ್ಥೆ ಮತ್ತು ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.