ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎನ್.ಆರ್. ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘನೆ ಆಗುತ್ತಿದೆ ಎಂದು ಮಾಜಿ ಮೇಯರ್ ಸಂದೇಸ್ ಸ್ವಾಮಿ ಆರೋಪಿಸಿದರು.ಎನ್.ಆರ್. ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ವೇಳೆ ಒಂದು ಪಕ್ಷದ ಕಾರ್ಯಕರ್ತರು ಹಾಗೂ ಗೂಂಡಾಗಳಂತೆ ವರ್ತಿಸುವ ಹಲವಾರು ಅಧಿಕಾರಿಗಳಿಂದ ಅರ್ಜಿಗಳನ್ನು ಬೆದರಿಸಿ ಕಸಿದು ಸಿಕ್ಕ ಸಿಕ್ಕವರಿಂದ ಭರ್ತಿ ಮಾಡಿಸಿ ವಾಪಸ್ ನೀಡುತ್ತಿದ್ದಾದಾರೆ. ಹೀಗಾಗಿ, ಜಿಲ್ಲಾದಿಕಾರಿ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಎನ್.ಆರ್. ಕ್ಷೇತ್ರಕ್ಕೆ ಭೇಟಿ ನೀಡುವ ಅಧಿಕಾರಿಗಳನ್ನು ಒಂದೆಡೆ ಶೆಡ್ ಗಳಲ್ಲಿ ಕೂಡಿ ಹಾಕಿ ಬಂಧಿಸುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ಇದರಿಂದಾಗಿ ಇವರ ಆತಂಕಕ್ಕೊಳಗಾಗಿದ್ದು, ಇವರಿಗೆ ಸೂಕ್ತ ರಕ್ಷಣೆ ನೀಡಬೇಕು. 2002 ರಿಂದ ಇದುವರೆಗೆ ಸುಮಾರು 1 ಲಕ್ಷ ಮತಗಳು ಹೆಚ್ಚಾಗಿವೆ. ಇದು ಹೇಗೆ ಸಾಧ್ಯ, ಅಲ್ಲಿ ಹೊಸ ಬಡಾವಣೆ ಆಗಿಲ್ಲ. ಜೊತೆಗೆ ಮನೆಗಳೂ ಹೆಚ್ಚಾಗಿಲ್ಲ. ಇದ್ದಷ್ಟೇ ಇವೆ. ಇದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಅವರು ಒತ್ತಾಯಿಸಿದರು.ಇಡೀ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಒಂದು ರೀತಿ ಇದ್ದರೆ ಇಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಧಿಕಾರಿಗಳಿಗೆ ರಕ್ಷಣೆಯಿಲ್ಲ. ಓರ್ವ ಅಧಿಕಾರಿ ಬೆದರಿಕೆ ಕಾರಣ ತಮ್ಮಿಂದ ಇಲ್ಲಿ ಕೆಲಸ ಮಾಡಲು ಸಾಧ್ಯವಾಗದೆಂದು ಹೆದರಿ ವಾಪಸಾದ ಘಟನೆ ನಡೆದಿದೆ. ಈ ಕುರಿತ ಹಲವಾರು ಅಕ್ರಮಗಳಿಗೆ ಸಂಬಂಧಿಸಿದ ಮಾಹಿತಿ ತಮ್ಮ ಬಳಿ ಇದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಅವರು ತಿಳಿಸಿದರು.
ಈ ಕ್ಷೇತ್ರದಲ್ಲಿ ಅನಕ್ಷರಸ್ಥರು ಹೆಚ್ಚಾಗಿದ್ದಾರೆ. ಬಹಳಷ್ಟು ಮಂದಿ ಬಡವರು. ಎಲ್ಲಾ ಧರ್ಮದವರೂ ಇಲ್ಲಿದ್ದಾರೆ. ಆದರೆ, ಹಲವರು ಗೂಂಡಾಗಳ ರೀತಿ ವರ್ತಿಸುವವರಿಂದಾಗಿ ಮನೆಯಿಂದ ಹೊರ ಬಂದು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಸಾಧ್ಯವಾಗದಂತಾಗಿದೆ. ಅಧಿಕಾರಿಗಳಿಂದ ಅರ್ಜಿಗಳನ್ನು ಹಲವರು ಬಲವಂತವಾಗಿ ಪಡೆದು ಎಲ್ಲೆಲ್ಲೋ ಭರ್ತಿ ಮಾಡಿಕೊಂಡು ಬಂದು ವಾಪಸ್ ನೀಡುತ್ತಿದ್ದಾರೆ ಎಂದು ದೂರಿದರು.
ಅಲ್ಲದೆ, ರಾಜ್ಯ ಸರ್ಕಾರದ ಗ್ಯಾರಂಟಿ ಸವಲತ್ತು ಪಡೆಯಲು ಎಸ್‌ಐಆರ್ ಭರ್ತಿ ಮಾಡಬೇಕು ಎಂದು ನಂಬಿಕೆ ಮೂಡಿಸಿರುವ ಕಾರಣ ಹಲವರು ಅಕ್ರಮಗಳಲ್ಲಿ ಹೆಚ್ಚಾಗಿ ತೊಡಗಿದ್ದಾರೆ. ಮತದಾರರ ವಾಸ ಸ್ಥಳ ದೃಢೀಕರಣಕ್ಕಾಗಿ ಮನೆಗೇ ಅಧಿಕಾರಿಗಳು ಭೇಟಿ ನೀಡಬೇಕು. ಇದರಿಂದಾಗಿ ನಿಜವಾದ ಮತದಾರರೇ ಎಂಬುದು ದೃಢ ಪಡುತ್ತದೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಿ ಅಕ್ರಮಗಳಿಗೆ ತಡೆ ಹಾಕಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಎನ್.ಆರ್. ಕ್ಷೇತ್ರದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಗಿರಿಧರ್, ಕಾರ್ತಿಕ್ ಮರಿಯಪ್ಪ, ರಮೇಶ್ ಇದ್ದರು.