- ‘ಜಿಲ್ಲೆಯ ಬರ ಪರಿಸ್ಥಿತಿ’, ‘ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ’ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಇ-ಆಫೀಸ್ ಮೂಲಕ ಫೈಲ್ಸ್ (ಕಡತ) ವಿಲೇವಾರಿ ಮಾಡದ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿಯಮ 12ರಡಿ ಶೋಕಾಸ್ ನೋಟಿಸ್ ಜಾರಿಗೊಳಿಸಿ 2 ರಿಂದ 3 ಇನ್ಕ್ರಿಮೆಂಟ್ ಕಡಿತಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ನಿರ್ದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ‘ಜಿಲ್ಲೆಯ ಬರ ಪರಿಸ್ಥಿತಿ’, ‘ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ’ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.ಜಿಲ್ಲೆ ಹಾಗೂ ತಾಲೂಕು ಮಟ್ಟದ ಆರೋಗ್ಯ, ಅರಣ್ಯ, ಕೃಷಿ, ತೋಟಗಾರಿಕೆ, ಪಶುಪಾಲನೆ, ತಾಪಂ ಮೊದಲಾದ ಇಲಾಖೆ ಅಧಿಕಾರಿಗಳು ಇ-ಆಫೀಸ್ ಬಳಕೆ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಇ-ಆಫೀಸ್ ಮೂಲಕ ಸಮರ್ಪಕ ಫೈಲ್ಸ್ ವಿಲೇವಾರಿ ಮಾಡದ ಎಲ್ಲಾ ಅಧಿಕಾರಿಗಳಿಗೆ ನಿಯಮ-12ರಡಿ ಶೋಕಾಸ್ ನೋಟಿಸ್ ಜಾರಿಗಳಿಸಿ. ಜತೆಗೆ 2 ರಿಂದ 3 ಇನ್ಕ್ರಿಮೆಂಟ್ ಕಟ್ ಮಾಡಿ ಎಂದು ನಿರ್ದೇಶಿಸಿದರು.
ಹಲವು ಬಾರಿ ಸರ್ಕಾರದಿಂದ ನಿರ್ದೇಶಿಸಿದರೂ ಈ ನಿರ್ಲಕ್ಷ್ಯ ಏಕೆ ಎಂದ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ 2-3 ತಾಸು ಸಭೆ ನಡೆಸಿ ಕೂಗಾಡಿ, ಹೋಗುತ್ತಾರೆ. ಟೀ-ಕಾಫಿ ಕುಡಿಯುವುದಕ್ಕೆ ಸಭೆ ನಡೆಸುತ್ತಾರೆ ಎಂಬ ಭಾವನೆ ಬೇಡ. ಈ ಧೋರಣೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯಾವುದೇ ಅಧಿಕಾರಿಗಳಿಗೆ ನಮ್ಮ ಮನೆ ಕೆಲಸ ಹೇಳುವುದಿಲ್ಲ. ಸರ್ಕಾರದ ಕೆಲಸ ದೇವರ ಕೆಲಸದಂತೆ ಕಾರ್ಯ ನಿರ್ವಹಿಸಬೇಕು. ತ್ವರಿತ ಇ-ಆಫೀಸ್ ಜಾರಿಗೊಳಿಸಲು ಕ್ರಮಕೈಗೊಳ್ಳಿ. ಇ-ಆಫೀಸ್ ಬಳಕೆ ಕುರಿತು ತಿಂಗಳು ವಾರು ಕಳೆದ ಒಂದು ವರ್ಷದ ಮಾಹಿತಿ ನೀಡುವಂತೆ ಸೂಚಿಸಿದರು.ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ ಇ-ಆಫೀಸ್ ಮೂಲಕವೇ ಕಂದಾಯ ಇಲಾಖೆಯಲ್ಲಿ ಕಡತ ನಿರ್ವಹಿಸಲಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈವರೆಗೆ 6181 ಕಡತಗಳಿಗೂ ಹೆಚ್ಚು ಹಾಗೂ 2 ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ 5999 ಕಡತಗಳಿಗೂ ಹೆಚ್ಚು, ತಾಲೂಕು ಕಚೇರಿಗಳಲ್ಲಿ 29,317 ಕಡತಗಳಿಗೂ ಹೆಚ್ಚು ಹಾಗೂ ನಾಡ ಕಚೇರಿಗಳಲ್ಲಿ 9903 ಕಡತಗಳನ್ನು ಇ-ಆಫೀಸ್ ಮೂಲಕವೇ ಸೃಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಿಳಂಬ ಇಲ್ಲದ ಹಣ ಬಿಡುಗಡೆ, ಏಕೆ ವಿಳಂಬ?ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ನೂತನ ಕಟ್ಟಡ ನಿರ್ಮಾನಕ್ಕೆ ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಲಾಗಿದೆ. ಅದೂ ಸಹ ಯಾವುದೇ ವಿಳಂಬ ಮಾಡದೇ ಹಣ ಬಿಡುಗಡೆ ಮಾಡಲಾಗಿದೆ. ಆದರೂ ಸಹ ಏಕೆ ಕಾಮಗಾರಿ ತಡವಾಗುತ್ತಿದೆ ಎಂದು ಲೋಕೋಪ ಯೋಗಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತ್ವರಿತ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಹಾಸ್ಟಲ್‌ಗಳಲ್ಲಿ ಬಿಸಿನೀರು, ಟಿವಿ ವ್ಯವಸ್ಥೆ ಮಾಡಿವಿದ್ಯಾರ್ಥಿಗಳಿಗೆ ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಹಾಸ್ಟಲ್‌ನಲ್ಲಿ ಇದ್ದು, ವಿದ್ಯಾಭ್ಯಾಸ ಮಾಡುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಹಾಸ್ಟಲ್‌ನಲ್ಲಿ ಉತ್ತಮ ಸೌಕರ್ಯ ಒದಗಿಸಬೇಕಿದೆ. ಒಳ್ಳೆಯ ಹಾಸಿಗೆ, ಬಿಸಿ ನೀರಿನ ವ್ಯವಸ್ಥೆ, ಟಿವಿ ವ್ಯವಸ್ಥೆ ಮಾಡಿ ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗೆ ನಿರ್ದೇಶಿಸಿದರು.
ಈ ವೇಳೆ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ ಪ್ರತಿ ಹಾಸ್ಟಲ್‌ಗೆ ತಲಾ ಒಬ್ಬ ನೋಡಲ್ ಅಧಿಕಾರಿ ನೇಮಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಡಾಕ್ಟರ್ ಭೇಟಿ, ಪರೀಕ್ಷೆಗೆ ಕ್ರಮ ವಹಿಸಲಾಗುತ್ತಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾಳಜಿ ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಅದಕ್ಕೆ ಪ್ರಕ್ರಿಯಿಸಿದ ಕಟಾರಿಯಾ ಪ್ರತಿ ಹಾಸ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಮಾರ್ಗದರ್ಶನ ನೀಡಲು ಪ್ರೋಜೆಕ್ಟರ್ ಅಳವಡಿಸುವಂತೆ ಸೂಚಿಸಿದರು.ಕೆರೆ ಸುತ್ತಾ ವಾಕಿಂಗ್ ಪಾತ್ ನಿರ್ಮಿಸಿ: ಚಿಕ್ಕಮಗಳೂರಿನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸದಿರುವ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿ ಕಳೆದ ಮೂರು ತಿಂಗಳಲ್ಲಿ ಕೆರೆ ಒತ್ತುವರಿ ತೆರವು ಬಗ್ಗೆ ವರದಿ ನೀಡಿ. ಕಳೆದ ಒಂದು ವರ್ಷದ ಕೆರೆ ನೀರಿನ ಪ್ರಮಾಣದ ಮಾಹಿತಿ ನೀಡುವಂತೆ ಸೂಚಿಸಿದರು. ಕೆರೆಗಳಿಗೆ ನೀರು ಬರುವ ಕಾಲುವೆಗಳ ಒತ್ತುವರಿ ತೆರವು ಬಗ್ಗೆ ಗಮನಿಸಿ ಎಂದರು. ಚಿಕ್ಕಮಗಳೂರಿನಲ್ಲಿ ಕೂಡಲೇ ಒಂದು ಕೆರೆಯಲ್ಲಿ ವಾಕಿಂಗ್ ಪಾತ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪವಿಭಾಗಾಧಿಕಾರಿ ನಟೇಶ್, ಚಿಕ್ಕಮಗಳೂರು ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ತಿರುಮಲೇಶ್, ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿ ಸತೀಶ್ ಮೊದಲಾದವರಿದ್ದರು.---ಬಾಕ್ಸ್--
ಕರ್ತವ್ಯ ಆ್ಯಪ್ ಹಾಜರಾತಿ ವರದಿ ಕೊಡಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿ ದಿನ ಬೆಳಗ್ಗೆ 10ಕ್ಕೆ ಎಲ್ಲ ಅಧಿಕಾರಿ ಸಿಬ್ಬಂದಿ ಕಚೇರಿಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಎಷ್ಟು ಅಧಿಕಾರಿ ಸಿಬ್ಬಂದಿ ಇದ್ದಾರೆ. ಎಷ್ಟು ಮಂದಿ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂಬ ವರದಿ ಶನಿವಾರ ಮಧ್ಯಾಹ್ನದೊಳಗೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
--ಬಾಕ್ಸ್--ಟಿಶು ಕಲ್ಚರ್ ಆಲೂಗಡ್ಡೆ ಸಸಿ ವಿತರಿಸಿಸಾಮಾನ್ಯವಾಗಿ ರಾಜ್ಯದ ಆಲೂಗಡ್ಡೆ ರೈತರು, ಪಂಜಾಬ್‌ನಿಂದ 6 ಅಥವಾ 7ನೇ ಜನರೇಷನ್ ಆಲೂಗಡ್ಡೆ ಬೀಜಗಳನ್ನು ತಂದು ನಾಟಿ ಮಾಡುತ್ತಾರೆ. ಇದರಿಂದ ಹೆಚ್ಚಿನ ಇಳುವರಿ ಬರುವುದಿಲ್ಲ. ಹೀಗಾಗಿ, ಹಾಸನದ ಆಲೂಗಡ್ಡೆ ಸಂಶೋಧನಾ ಕೇಂದ್ರ ಮಾದರಿಯಲ್ಲಿ ಚಿಕ್ಕಮಗಳೂರು ತೋಟಗಾರಿಕೆ ನರ್ಸರಿಗಳಲ್ಲಿ ಟಿಶು ಕಲ್ಚರ್ ಆಲೂಗಡ್ಡೆ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಣೆ ಮಾಡಿ. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಎಂದು ಕಟಾರಿಯಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕೆ. ಮಂಗಳಾ ಅವರಿಗೆ ಸೂಚಿಸಿದರು.
---ಬಾಕ್ಸ್---ಮಳೆ ಮಾಪನ ಸೆನ್ಸರ್ ರಿಪೇರಿಗೆ ಎಷ್ಟು ದಿನ ಬೇಕು?
ಜಿಲ್ಲೆಯಲ್ಲಿ 223 ಮಳೆ ಮಾಪನ ಸೆನ್ಸರ್ ಇದ್ದು, 123 ಕಾರ್ಯನಿರ್ವಹಿಸುತ್ತಿವೆ. ಉಳಿದ 120 ಮಳೆ ಮಾಪನ ಸೆನ್ಸರ್ ದುರಸ್ತಿಯಲ್ಲಿ ಇವೆ. ಈ ರೀತಿಯಾದರೆ ಹೇಗೆ ವಾಸ್ತವಿಕ ಮಳೆ ಮಾಪನ ದತ್ತಾಂಶ ಸಂಗ್ರಹಣೆ ಸಾಧ್ಯ ಎಂದ ಅವರು ತಕ್ಷಣ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಎಂ.ಎಸ್. ದಿವಾಕರ್‌ಗೆ ಫೋನ್ ಮೂಲಕ ಸೆನ್ಸರ್ ರಿಪೇರಿಗೆ ಎಷ್ಟು ದಿನ ಬೇಕು. ತ್ವರಿತವಾಗಿ ರಿಪೇರಿ ಕಾರ್ಯ ನಡೆಸುವಂತೆ ತಿಳಿಸಿದರು.