ಕನ್ನಡಪ್ರಭ ವಾರ್ತೆ ಹನೂರು
ಈ ಸಂಬಂಧ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ಶಾಗ್ಯ ವಲಯದ ಹೊಳೆದಟ್ಟಿ ಅರಣ್ಯದ ಕರಡಿಕಲ್ಲು ಗುಡ್ಡದಲ್ಲಿರುವ ಶೂಟೌಟ್ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯಿಂದ ಘಟನೆಯ ದಿನದ ಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಗುಂಡಿನ ಚಕಮಕಿ ನಡೆದ ಸ್ಥಳ, ಆರೋಪಿಗಳ ಚಲನವಲನ, ಸಿಬ್ಬಂದಿ ಕಾರ್ಯಾಚರಣೆಯ ವಿಧಾನದ ಬಗ್ಗೆ ವಿವರವಾಗಿ ವಿಚಾರಣೆ ನಡೆಸಿದರು.ಬಳಿಕ ಶೂಟೌಟ್ ನಂತರ ದುಷ್ಕರ್ಮಿಗಳು ಜಿಲೆಟಿನ್ ಸ್ಫೋಟಕ ಬಳಸಿ ಕಳ್ಳ ಬೇಟೆ ತಡೆ ಶಿಬಿರಗಳ ಧ್ವಂಸಗೊಳಿಸಿದ್ದ ಶಾಗ್ಯ ಡಿಆರ್‌ಎಫ್‌ಒ ಕಚೇರಿ, ಹಾಗೂ ಕಳ್ಳಿ ದೊಡ್ಡಿ ಬಳಿ ಬರುವ ಅರಣ್ಯ ಇಲಾಖೆ ಗೆಸ್ಟ್ ಹೌಸ್, ಕಳ್ಳ ಬೇಟೆ ತಡೆ ಶಿಬಿರ ಸೇರಿದಂತೆ ತೋಮಿಯಾರ್ ಪಾಳ್ಯ ಕಳ್ಳಬೇಟೆ ತಡೆ ಶಿಬಿರ, ಕಾರಯ್ಯನ ಬೆಟ್ಟ ಕಳ್ಳಬೇಟೆ ತಡೆ ಶಿಬಿರ, ಬೇಟೆಗಾರನ ಗುಡ್ಡ ಕಳ್ಳಬೇಟೆ ತಡೆ ಶಿಬಿರದ ಘಟನಾ ಸ್ಧಳಕ್ಕೆ ಭೇಟಿ ನೀಡಿ 8 ಕಳ್ಳ ಬೇಟೆ ತಡೆ ಶಿಬಿರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು .
ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ ಹಂತದಲ್ಲಿದ್ದು, ಇದರೊಂದಿಗೆ ಸಿಐಡಿ ತನಿಖೆಯೂ ನಡೆಯುತ್ತಿದೆ. ಈ ಘಟನೆ ರಾಜ್ಯ ಹಾಗೂ ತಮಿಳುನಾಡು ಗಡಿಯಲ್ಲಿ ಸಂಚಲನ ಮೂಡಿಸಿದ್ದು, ಸ್ಫೋಟಕ ಪ್ರಕರಣದಲ್ಲಿ ನಕ್ಸಲ್ ನಿಗ್ರಹ ದಳ (ANF) ಮತ್ತು ಎನ್‌ಐಎ ತನಿಖೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.