ಹಳೇ ಸಾಲಕ್ಕೆ ಹೊಸ ಮಾಲೀಕರ ಅಂಗಡಿ ಜಪ್ತಿ

KannadaprabhaNewsNetwork | Published : Aug 20, 2024 12:49 AM

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಕರೂರು ವೈಶ್ಯ ಬ್ಯಾಂಕ್‌ ಸಿಬ್ಬಂದಿ ಏಕಾಏಕಿ ಸಾಲ ವಸೂಲಾತಿಗೆ ಆಗಮಿಸಿ 2014ರಲ್ಲಿ ಅಂಗಡಿ ಮೂಲ ಮಾಲೀಕರು ಮಾಡಿದ್ದ 20 ಲಕ್ಷ ರು. ಸಾಲಕ್ಕೆ ಬಡ್ಡಿ ಸೇರಿಸಿ 73 ಲಕ್ಷ ರು. ಪಾವತಿಸುವಂತೆ ಹೊಸ ಮಾಲೀಕರಿಗೆ ಸೂಚಿಸಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಚರ್ಚೆಗೆ ಗ್ರಾಸವಾದ ಬ್ಯಾಂಕ್‌ ನಡೆ । ಡಿಸಿ, ಎಸ್ಪಿ ಮಧ್ಯ ಪ್ರವೇಶಕ್ಕೆ ಆಗ್ರಹ । ₹20 ಲಕ್ಷ ಸಾಲಕ್ಕೆ ₹73 ಲಕ್ಷ ನೀಡುವಂತೆ ಹೇಳಿದ್ದ ಬ್ಯಾಂಕ್‌

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಹಳೇ ಮಾಲೀಕರ ಸಾಲಕ್ಕೆ ಹೊಸ ಮಾಲೀಕರ ಅಂಗಡಿಗಳಿಗೆ ಬೀಗ ಜಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕರೂರು ವೈಶ್ಯ ಬ್ಯಾಂಕ್‌ ಸಿಬ್ಬಂದಿ ಏಕಾಏಕಿ ಸಾಲ ವಸೂಲಾತಿಗೆ ಆಗಮಿಸಿ 2014ರಲ್ಲಿ ಅಂಗಡಿ ಮೂಲ ಮಾಲೀಕರು ಮಾಡಿದ್ದ 20 ಲಕ್ಷ ರು. ಸಾಲಕ್ಕೆ ಬಡ್ಡಿ ಸೇರಿಸಿ 73 ಲಕ್ಷ ರು. ಪಾವತಿಸುವಂತೆ ಹೊಸ ಮಾಲೀಕರಿಗೆ ಸೂಚಿಸಿದ್ದು ಈಗ ಬ್ಯಾಂಕ್‌ ನಡೆ ಸಾರ್ವಜನಿಕರು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಆಗಿದ್ದೇನು?:

ಕೊಳ್ಳೇಗಾಲ ಪಟ್ಟಣದ ಸುಬ್ರಮಣ್ಯೇಶ್ವರ ರಸ್ತೆಯಲ್ಲಿ ಕೃಷ್ಣಸ್ಟೋರ್, ಮಧು ಟೈಲರ್, ಯಶ್ ಪಾರ್ಲರ್ ಸೇರಿದಂತೆ ನಾಲ್ಕು ಮಳಿಗೆಗಳಿದ್ದು 2017ರಲ್ಲಿ ಅವು ಈಗಿನ ಮಾಲೀಕರಿಗೆ ವರ್ಗಾವಣೆ ಆಗಿದೆ. ಹಿಂದಿನ ಮಾಲೀಕರಾಗಿದ್ದ ರಂಗನಾಥ ಅವರು ಮಾರಾಟ ಮಾಡಿದ್ದು ಅದನ್ನು ಇ-ಸ್ವತ್ತು ಖಾತೆ ಸಹ ಮಾಡಿಸಲಾಗಿದೆ. ಆದರೆ ಈ ಅಂಗಡಿಗಳ ಮೇಲೆ ರಂಗನಾಥ ಅವರು ಒಟ್ಟು 35 ಲಕ್ಷ ರು. ಸಾಲ ತೆಗೆದುಕೊಂಡಿದ್ದರು ಎನ್ನಲಾಗಿದೆ. ಅದರಲ್ಲಿ 15 ಲಕ್ಷ ರು. ತಾವು ಬಳಸಿಕೊಂಡು 20 ಲಕ್ಷ ರು.ಅನ್ನು ಅಳಿಯನಿಗೆ ಕೊಟ್ಟಿದ್ದರು ಎನ್ನಲಾಗಿದೆ. ಇದರಲ್ಲಿ ಅಳಿಯ ಬ್ಯಾಂಕ್‌ಗೆ ಹಣ ಮರುಪಾವತಿ ಮಾಡಿಲ್ಲ. ಈ ನಡುವೆ ತಮ್ಮ ಪಾಲಿನ 15 ಲಕ್ಷ ರು. ವಾಪಸ್ಸು ಪಾವತಿಸಿದ್ದ ರಂಗನಾಥ ಮಾರಾಟ ಮಾಡುವಾಗ ಈ ವಿಷಯ ಮುಚ್ಚಿಟ್ಟು ಎಲ್ಲಾ ಕ್ಲಿಯರ್ ಆಗಿದೆ ಎಂದು ಹೇಳಿ ಮಾರಾಟ ಮಾಡಿದ್ದರು.

ಆದರೆ ಈಗ ಹಳೇ ಸಾಲ ವಸೂಲಾತಿಗೆ ಇಳಿದಿರುವ ಕರೂರು ವೈಶ್ಯ ಬ್ಯಾಂಕ್‌ ಅಧಿಕಾರಿಗಳು ಅಂಗಡಿಗಳ ಮೇಲೆ ಸಾಲ ಇದೆ ಎಂದು ಹೇಳಿ 2014ರ 20 ಲಕ್ಷ ರುಪಾಯಿಗೆ 10 ವರ್ಷದ ಬಡ್ಡಿ ಸೇರಿಸಿ ಬರೋಬ್ಬರಿ 73 ಲಕ್ಷ ರು. ಪಾವತಿಸುವಂತೆ ಈಗಿನ ಅಂಗಡಿ ಮಾಲೀಕರಿಗೆ ತಿಳಿಸಿದ್ದಾರೆ. ಇದಕ್ಕೆ ಅಂಗಡಿ ಮಾಲೀಕರು ಒಪ್ಪದೇ ಇದ್ದಾಗ ಅಂಗಡಿಗಳನ್ನು ಸೀಜ್‌ ಮಾಡಿದ್ದು ಪ್ರಕರಣ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅಂಗಳಕ್ಕೆ ಬಂದು ನಿಂತಿದೆ.

ಸೋಮವಾರ ಮಳಿಗೆಗಳಲ್ಲಿ ಇದ್ದ ಸಾಮಾನುಗಳನ್ನು ಜಪ್ತಿ ಮಾಡಲು ಮುಂದಾದ ವೇಳೆ ವಿಷಯ ತಿಳಿದು ಅಂಗಡಿ ಮಾಲೀಕರ ಪರವಾಗಿ ಪ್ರತಿಭಟನೆ ನಡೆಸಿದ ಛಲವಾದಿ ಮಹಾಸಭೆ, ರಕ್ಷಣಾ ವೇದಿಕೆ, ರೈತ ಸಂಘದ ಕಾರ್ಯಕರ್ತರು ಬ್ಯಾಂಕ್‌ ಸಿಬ್ಬಂದಿ ನಡೆಯನ್ನು ಖಂಡಿಸಿದ್ದಾರೆ.

ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಅಯಾಬ್ ಕನ್ನಡಿಗ, ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಬಿಸಿಲಯ್ಯ, ಅಫ್ಜಲ್, ರಾಮಕೖಷ್ಣ, ಅಯೂಜ್, ಮಹಿಳಾ ಸಂಘಗಳ ಪದಾಧಿಕಾರಿಗಳು ಇದ್ದರು.

Share this article