ಎಂ.ಕೆ.ಹರಿಚರಣತಿಲಕ್
ಪಟ್ಟಣದಾದ್ಯಂತ ಫುಟ್ ಪಾತ್ ನಲ್ಲಿ ಅಂಗಡಿಗಳು ತಲೆ ಎತ್ತಿರುವುದರಿಂದ ಪಾದಚಾರಿಗಳು ಫುಟ್ ಪಾತ್ ಸಂಚರಿಸದೇ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ನಿತ್ಯ ಹೊಸ ಹೊಸದಾಗಿ ಫುಟ್ ಪಾತ್ ಅಂಗಡಿಗಳು ತಲೆಯೆತ್ತುತ್ತಲೇ ಇದ್ದು, ಪುರಸಭೆ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮೌನವಾಗಿವೆ.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯೇ ಸಾರ್ವಜನಿಕರಿಗೆ ತಿರುಗಾಡಲು ಪಾದಚಾರಿ ಮಾರ್ಗ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಫುಟ್ ಪಾತ್ ರಸ್ತೆಯಲ್ಲಿ ಅತಿಕ್ರಮಿಸಿಕೊಂಡಿರುವ ವ್ಯಾಪಾರಿಗಳು. ಪಟ್ಟಣದಲ್ಲಿ ಪಾದಚಾರಿಗಳು ಅನುಭವಿಸುತ್ತಿರುವ ಸಂಕಷ್ಟದ ಸ್ಥಿತಿ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಕಾಣುತ್ತಿಲ್ಲ.ನ್ಯಾಯಾಲಯದ ಆದೇಶದ ಮೇರೆಗೆ ಬೆಂಗಳೂರು ಮಹಾನಗರ, ಮೈಸೂರು, ಹಾಸನ, ಮಂಗಳೂರು ಮುಂತಾದ ಕಡೆಗಳೆಲ್ಲಾ ಜೆಸಿಬಿ ಸದ್ದು ಮಾಡುತ್ತಾ ಫುಟ್ ಪಾತ್ ಅಂಗಡಿಗಳ ತೆರವು ಕಾರ್ಯ ನಡೆಯುತ್ತಿದೆ. ಸಚಿವ ಕೃಷ್ಣ ಬೈರೈಗೌಡರ ಗಟ್ಟಿ ನಿಲುವಿಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ದೊರಕಿದ್ದರೂ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಾತ್ರ ಎಲ್ಲೆಂದರಲ್ಲಿ ನಿತ್ಯ ಹೊಸದಾಗಿ ಫುಟ್ ಪಾತ್ ಅಂಗಡಿಗಳು ತಲೆಯೆತ್ತುತ್ತಲೇ ಇವೆ.
ಪಟ್ಟಣದಲ್ಲಿ ಸುಮಾರು ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಅಗ್ರಹಾರ, ಹಳೇ ಕೆ.ಆರ್.ಪೇಟೆ, ಸುಭಾಷ್ ನಗರ, ಜಯನಗರ, ಹೇಮಾವತಿ ಬಡಾವಣೆ, ಬಸವೇಶ್ವರ ನಗರ, ಮುತ್ತುರಾಯಸ್ವಾಮಿ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿವೆ.
ಮದುವೆ ಮತ್ತಿತರ ಶುಭ ಕಾರ್ಯಗಳಿಗೂ ಸಾವಿರಾರು ಜನ ಪಟ್ಟಣಕ್ಕೆ ಆಗಮಿಸುತ್ತಾರೆ. ಇದರ, ಜೊತೆಗೆ ತಾಲೂಕು ಕಚೇರಿ, ಬ್ಯಾಂಕ್ ವ್ಯವಹಾರ, ಆಸ್ತಿ ನೋಂದಣಿ ಸೇರಿದಂತೆ ವಿವಿಧ ವ್ಯವಹಾರಗಳಿಗೆ ನಿತ್ಯ ತಾಲೂಕಿನ ಮೂಲೆ ಮೂಲೆಗಳಿಂದ ಜನ ಪಟ್ಟಣಕ್ಕೆ ಬರುತ್ತಾರೆ. ಪಟ್ಟಣ ನಿತ್ಯ ಜನಜಂಗುಳಿಯಿಂದ ತುಂಬಿರುತ್ತದೆ.
ಹೂವು, ಹಣ್ಣು ತರಕಾರಿ, ಬಟ್ಟೆ, ಪಪ್ಪಲಿ ಮಾರುವವರು, ಪಾನಿಪುರಿ, ಕಬಾಬ್ ಮಾರುವವರಿಂದ ಹಿಡಿದು ಕಾರು ಮಾರಾಟ, ಸ್ಕೂಟರ್ ಮಾರಾಟ, ಫರ್ನಿಚರ್ ಮಾರಾಟ ಮಾಡುವವರವರೆಗೆ ಎಲ್ಲಾ ಬಗೆಯ ವ್ಯಾಪಾರಿಗಳೂ ಸಾರ್ವಜನಿಕರ ಫುಟ್ ಪಾತ್ ಅತಿಕ್ರಮಿಸಿದ್ದಾರೆ. ಕೆಲ ಅಂಗಡಿ ಮಾಲೀಕರೂ ಶೀಟ್ ಹಾಕಿಕೊಂಡು ತಮ್ಮ ಅಂಗಡಿಗಳನ್ನು ಫುಟ್ ಪಾತ್ ವರೆಗೂ ವಿಸ್ತರಿಸಿಕೊಂಡಿದ್ದಾರೆ.
ಸರಿಯಾದ ಫುಟ್ ಪಾತ್ ಇಲ್ಲದೆ ಜನರು ರಸ್ತೆ ಮದ್ಯೆ ನಡೆಯುತ್ತಿದ್ದಾರೆ. ಇದರಿಂದ ವಾಹನಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ಒಂದಲ್ಲ ಒಂದು ಕಡೆ ಅಪಘಾತಗಳು ಸಂಭವಿಸುತ್ತಿವೆ. ಆದರೆ, ಪೊಲೀಸ್ ಇಲಾಖೆ ಅಥವಾ ಪುರಸಭೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಜನಸಂಚಾರಕ್ಕೆ ಸುಗಮ ದಾರಿ ಮಾಡಿಕೊಡುವ ಪ್ರಯತ್ನ ಮಾಡುತ್ತಿಲ್ಲ.ಫುಟ್ ಪಾತ್ ತೆರವು ಕಾರ್ಯಚರಣೆ ಆರಂಭಿಸಿದಾಗ ರಾಜಕಾರಣಿಗಳ ಮಧ್ಯಪ್ರವೇಶವಾಗುತ್ತದೆ. ರಾಜಕಾರಣಿಗಳಿಗೆ ಅಕ್ರಮ ವ್ಯಾಪಾರಿಗಳ ಪರ ಬರುತ್ತದೆ. ಬೆರಳೆಣಿಕೆಯಷ್ಟು ವ್ಯಾಪಾರಿಗಳ ಹಿತರಕ್ಷಣೆಗಾಗಿ ಪಟ್ಟಣಕ್ಕೆ ನಿತ್ಯ ಆಗಮಿಸುವ ಸಾವಿರಾರು ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತವನ್ನು ಬಲಿಕೊಡಲಾಗುತ್ತಿದೆ.
ಪುರಸಭೆ ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಫುಟ್ ಪಾತ್ ಒತ್ತುವರಿ ತೆರವುಗೊಳಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ರಸ್ತೆಯಲ್ಲಿ ವಾಹನಗಳು, ಫುಟ್ ಪಾತ್ ನಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಬೇಕು.