ಚವಡಾಪುರ: ಅಫಜಲ್ಪುರ ತಾಲೂಕಿನ ಚವಡಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಟ್ಟು ಭಸ್ಮವಾಗಿರುವ ಘಟನೆ ಶುಕ್ರವಾರ ನಡೆದಿದೆ.
ಚವಡಾಪುರ ಗ್ರಾಮದ ರೈತರಾದ ಸೈಬಣ್ಣ ಮಲ್ಲಪ್ಪ ಜಮಾದಾರ ಅವರು 5 ಎಕರೆ ಹಾಗೂ ರಾಜು ಅಂಬಣ್ಣ ಅವರ 4 ಎಕರೆ ಕಬ್ಬು ವಿದ್ಯತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಟ್ಟು ಹೋಗಿದೆ. ಬೆಂಕಿಗೆ ಆಹುತಿಯಾಗುತ್ತಿದ್ದುದ್ದನ್ನು ಕಂಡು ಅಗ್ನಿಶಾಮಕ ದಳದವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬೆಂಕಿ ನಂದಿಸುವಷ್ಟರಲ್ಲಿ 9 ಎಕರೆ ಕಬ್ಬು ಸುಟ್ಟು ಕರಕಲಾಗಿದ್ದು, ರೈತರ ಚಿಂತೆ ಇಮ್ಮುಡಿಗೊಳಿಸಿದೆ. ವಿದ್ಯುತ್ ಅವಗಢದಿಂದಾಗಿ ಕಟಾವಿಗೆ ಬಂದ ಕಬ್ಬು ಸುಟ್ಟಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.ಅಗ್ನಿ ಅವಘಡ; ಅಖಂಡಹಳ್ಳಿಯಲ್ಲಿ 18 ಎಕರೆ ಕಬ್ಬು ನಾಶ
ಯಡ್ರಾಮಿ: ತಾಲೂಕಿನ ಅಖಂಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಅಗ್ನಿ ಅವಘಡದಿಂದ18 ಎಕರೆಯಲ್ಲಿ ಬೆಳೆದ ಕಬ್ಬು ನಾಶವಾಗಿದೆ.ಗ್ರಾಮದ ರೈತ ಮಲ್ಲಿಕಾರ್ಜುನ ಹೂಗಾರ ಅವರು ಲೀಜ್‌ಗೆ ಪಡೆದು 6 ಎಕರೆ ಹಾಗೆ 12 ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಹೊಲಗಳ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಹಾಯ್ದು ಹೋಗಿದ್ದು, ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಮಕಿ ನಂದಿಸಿದ್ದಾರೆ.
ಪರಿಹಾರಕ್ಕೆ ಒತ್ತಾಯ: ಕಟಾವಿನ ಹಂತದಲ್ಲಿದ್ದ ಕಬ್ಬನ್ನು ರೈತರು ಕಾರ್ಖಾನೆಗೆ ಸಾಗಿಸುವ ಸಿದ್ಧತೆಯಲ್ಲಿದ್ದರು. ಈ ವೇಳೆ ಅವಘಡ ಸಂಭವಿಸಿ ಹಾನಿಯಾದ ಹಿನ್ನೆಲೆ ಮಳ್ಳಿ ಉಗಾರ ಶುಗರ್ ಕಾರ್ಖಾನೆ ತಕ್ಷಣ ಕಬ್ಬು ಕಟಾವು ಮಾಡಬೇಕು. ಹಾನಿಯಾದ ಕಬ್ಬಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮಲ್ಲಿಕಾರ್ಜುನ ಹೂಗಾರ ಮನವಿ ಮಾಡಿದ್ದಾರೆ.