ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ ಅಂಬೆಗಾಲು-6 ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬೆಳ್ಳಿ ಮಂಡಲ ಕಾರ್ಯಾಧ್ಯಕ್ಷ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಡಿ.ಎಸ್.ಅರುಣ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಂಬೆಗಾಲು-6 ಕಿರುಚಿತ್ರ ಸ್ಪರ್ಧೆಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಗಳಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಕ್ರಿಯಾಶೀಲ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ ಎಂದರು.ಇದುವರೆಗೂ ನಡೆದ ಅಂಬೆಗಾಲು ಕಿರುಚಿತ್ರದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಈಗ ಆರನೇ ವರ್ಷದಲ್ಲಿ ಈ ಅಂಬೆಗಾಲು- 6 ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ರಾಜ್ಯದೆಲ್ಲೆಡೆಯಿಂದ ಶ್ರೇಷ್ಠ ಗುಣಮಟ್ಟದ ಕಿರುಚಿತ್ರಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.ಯುವ ಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕಿರುಚಿತ್ರ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು, ಶೀರ್ಷಿಕೆ ಹಾಗೂ ಟೈಟಲ್ ಕಾರ್ಡ್ ಸೇರಿ 5 ರಿಂದ 7 ನಿಮಿಷಗಳ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು ಎಂದು ಹೇಳಿದರು.ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು, ಕಲಾವಿದರು ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 50 ಸಾವಿರ ರು. ಪ್ರಥಮ ಬಹುಮಾನ, 30 ಸಾವಿರ ರು., ದ್ವಿತೀಯ ಬಹುಮಾನ ಜೊತೆಗೆ ಶ್ರೇಷ್ಠ ನಟ, ಶ್ರೇಷ್ಠ ನಟಿ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ಕಥೆ-ಚಿತ್ರಕಥೆ, ಶ್ರೇಷ್ಠ ಛಾಯಾಗ್ರಹಣ, ಶ್ರೇಷ್ಠ ಸಂಗೀತ, ಶ್ರೇಷ್ಠ ಸಂಗೀತ ವಿಭಾಗಗಳಲ್ಲಿ ಹತ್ತು ಮಂದಿಗೆ ತಲಾ 5 ಸಾವಿರ ರು. ನಗದು ಆಕರ್ಷಣೀಯ ಸ್ಮರಣಿಕೆಗಳಿವೆ ಎಂದು ವಿವರಿಸಿದರು. ಪ್ರಶಸ್ತಿ ಪುರಸ್ಕೃತರಿಗೆ ಅಕ್ಟೋಬರ್ ಮಾಸಾಂತ್ಯದಲ್ಲಿ, ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಕಿರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 1,000. ರು.ಗಳ ಪ್ರವೇಶ ಶುಲ್ಕವಿದ್ದು, ಅರ್ಜಿಗಳನ್ನು ಬಿ.ಎಚ್.ರಸ್ತೆಯ ದೀಪಕ್ ಪೆಟ್ರೋಲ್ ಬಂಕ್‍ನಲ್ಲಿ ಪಡೆದು, ಜು.31ರೊಳಗೆ ಸಲ್ಲಿಸಬೇಕು. ಜೊತೆಗೆ ಕಿರು ಚಿತ್ರಗಳನ್ನು ನಾಲ್ಕು ಎಚ್‍ಡಿ ಶ್ರೇಣಿಯ ಡಿವಿಡಿ ಸಹಿತ ಆಗಸ್ಟ್ 30ರೊಳಗೆ ಒಳಗಾಗಿ ಸಲ್ಲಿಸಬಹುದು. ಮಾಹಿತಿಗೆ ಮೊ.ಸಂ.98444 56505, 94492 84495 ಸಂಪರ್ಕಿಸಬಹುದು ಎಂದು ತಿಳಿಸಿದರು.ಬೆಳ್ಳಿ ಮಂಡಲದ ವೈದ್ಯ ಮಾತನಾಡಿ, ಗ್ರಾಮೀಣ ಪ್ರತಿಭೆ ಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ಮತ್ತು ಶಿವಮೊಗ್ಗವನ್ನು ಒಂದು ಚಲನಚಿತ್ರ ಚಟುವಟಿಕೆಗಳ ಕೇಂದ್ರವನ್ನಾಗಿಸುವ ದೃಷ್ಟಿಯಿಂದ ಕಾರ್ಯಾಗಾರವನ್ನು ಆಯೋಜಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ನಾಗಭೂಷಣ, ಜಿ.ವಿಜಯಕುಮಾರ್, ಚೇತನ್, ಆನಂದ, ಚಂದ್ರಶೇಖರ್, ಶಿವಾನಂದ್, ಸುಕುಮಾರ್, ಸಂತೋಷ್, ಮಂಜುನಾಥ್, ಶ್ರೀನಿಧಿ ಚೇತನ್, ರಘುನಂದನ್, ಶಿವು, ಎನ್.ಬಿ.ರವೀಶ ಮತ್ತಿತರರಿದ್ದರು.