ಸವಣೂರು: ಬಿತ್ತನೆ ಹಂಗಾಮು ಪ್ರಾರಂಭವಾದರೂ ತಾಲೂಕಿನಲ್ಲಿ ರೈತರಿಗೆ ಇದುವರೆಗೂ ಸಮರ್ಪಕವಾಗಿ ಡಿಎಪಿ ಗೊಬ್ಬರ ದೊರೆಯದೆ ರೈತರು ಪರದಾಡುವಂತಾಗಿದೆ. ಕ್ಷೇತ್ರದ ಶಾಸಕರು ರೈತರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಶಾಸಕ ಯಾಸೀರಖಾನ್ ಪಠಾಣ ಅವರನ್ನು ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮವಾರ ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಜರುಗಿತು. ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ರೈತರು ಮತ್ತು ರೈತ ಸಂಘದ ಪದಾಧಿಕಾರಿಗಳು ರಸಗೊಬ್ಬರ ಕೊರತೆ ಕುರಿತು ಶಾಸಕರ ಜತೆ ವಾಗ್ವಾದ ನಡೆಸಿದರು.ರೈತರಿಗೆ ರಸಗೊಬ್ಬರಗಳ ತಯಾರಿಕೆ ಮತ್ತು ಪೂರೈಕೆಯನ್ನು ಕೇಂದ್ರ ಸರ್ಕಾರ ಮಾಡುತ್ತದೆ. ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಕೇಳಿದರೆ ನಾನು ಮಾತನಾಡಬಹುದು ಎಂದು ಶಾಸಕ ಪಠಾಣ ಎನ್ನುತ್ತಿದ್ದಂತೆ, ಆಕ್ರೋಶಗೊಂಡ ರೈತರು ತಾಲೂಕಿನಲ್ಲಿ ಬೀಡಿ ಅಂಗಡಿ, ಕಿರಾಣಿ ಅಂಗಡಿ ಸೇರಿದಂತೆ ದಿನಸಿ ಅಂಗಡಿಗಳಲ್ಲಿ ಮದ್ಯ ಅಕ್ರಮವಾಗಿ ದೊರೆಯುತ್ತಿದೆ. ರಸಗೊಬ್ಬರ ಕೇಳಿದರೆ ಶಾಸಕರಾದ ತಾವು ಮತ್ತೊಬ್ಬರ ಕಡೆಗೆ ತೋರಿಸುತ್ತಿರಿ. ತಾಲೂಕಿನ ರೈತರ ಗೋಳನ್ನು ಕೇಳುವವರು ಯಾರು ಇಲ್ಲ. ನೀವು ಶಾಸಕರಾಗಿ ಬಂದ ಮೇಲೆ ಒಮ್ಮೆಯಾದರೂ ರೈತರ ಸಮಸ್ಯೆಗಳನ್ನು ಕೇಳಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡರು.
ತಕ್ಷಣ ಎಚ್ಚೆತ್ತುಕೊಂಡ ಶಾಸಕ ಇಂದು(ಮಂಗಳವಾರ) ಮಧ್ಯಾಹ್ನ 3 ಗಂಟೆಗೆ ಉಪವಿಭಾಗಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ರೈತರ ಅಹವಾಲು ಸ್ವೀಕಾರ, ಸಮಸ್ಯೆಗಳ ಪರಿಹಾರಕ್ಕೆ ಸಭೆಯನ್ನು ಆಯೋಜಿಸಲಾಗುವುದು. ಸಭೆಗೆ ತಾಲೂಕಿನ ರೈತರು ತಮ್ಮ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿಕೊಂಡು ಪಾಲ್ಗೊಳ್ಳಬೇಕು ಎಂದರು.
ಸವಣೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ ಮಾತನಾಡಿ, ಬಿತ್ತನೆ ಬೀಜ ಕೊರತೆ ಇಲ್ಲ. ಡಿಎಪಿ ಗೊಬ್ಬರ ಸರಬರಾಜು ನಿಧಾನಗತಿಯಲ್ಲಿ ಇರುವುದರಿಂದ ಡಿಎಪಿ ಬದಲಾಗಿ ಬೇರೆ ಬೇರೆ ರಾಸಾಯಿನಿಕ ಕಾಂಪ್ಲೆಕ್ಸ್ ಬಳಕೆ ಮಾಡಲು ರೈತರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಆದರೆ, ದರ ಹೆಚ್ಚಳದಿಂದ ರೈತರಲ್ಲಿ ಗೊಂದಲ ಮೂಡಿದೆ ಎಂದರು.ನಂತರ ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ವಿತರಿಸುತ್ತಿರುವ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಪುರಸಭೆ ಅಧ್ಯಕ್ಷ ಅಲ್ಲಾವುದೀನ್ ಮನಿಯಾರ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ, ರೈತ ಸಂಘಟನೆಗಳ ಪದಾಧಿಕಾರಿಗಳಾದ ಶಿವಾನಂದ ಯಲಿಗಾರ, ಚನ್ನಪ್ಪ ಮರಡೂರ, ಸಂಗಮೇಶ ಪೀತಾಂಬ್ರಶೆಟ್ಟಿ, ಅಬ್ದುಲ್ ಬುಡಂದಿ, ನಾಗರಾಜ ಬಂಕಾಪೂರ ಸೇರಿದಂತೆ ತಾಲೂಕಿನ ರೈತರು ಪಾಲ್ಗೊಂಡಿದ್ದರು.